Flash News

ಮುಸ್ಲಿಂ ಯುವತಿಯ ಜೊತೆ ಇದ್ದ ಕಾರಣಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ಆರೋಪ: SDPI ಕಾರ್ಯಕರ್ತರು ಸೇರಿ ಹಲವರ ವಿರುದ್ಧ ಪ್ರಕರಣ

ಕೊಪ್ಪಳ: ಮುಸ್ಲಿಂ ಯುವತಿಯ ಜೊತೆ ಇದ್ದ ಕಾರಣಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಕೇಳಿಬಂದಿದೆ.

ಗಂಡನೊಂದಿಗೆ ಜಗಳವಾಡಿ ಮಕ್ಕಳ ಸಮೇತ ಮನೆ ಬಿಟ್ಟು ಹೋಗಿದ್ದ ಆಫಿಯಾಳನ್ನು ಮನವೋಲಿಸಿ ಕರೆತರಲು ಗಂಡ ಅಜ್ಮೀರ್ ನೀಡಿದ ಸೂಚನೆಯಂತೆ ವೆಂಕಟೇಶ ಗಂಗಾವತಿ ಬಸ್ ನಿಲ್ದಾಣಕ್ಕೆ ತೆರಳಿದ್ದನು ಎನ್ನಲಾಗಿದೆ. ಬಸ್ ನಿಲ್ದಾಣದಲ್ಲಿ ಬುರ್ಕಾ ಧರಿಸಿದ್ದ ಆಫಿಯಾ ಮತ್ತು ಆಕೆಯ 16 ವರ್ಷದ ಮಗಳ ಜೊತೆ ಮಾತನಾಡುತ್ತಿದ್ದ ವೆಂಕಟೇಶನನ್ನು ಕಂಡ ಕೆಲವು ಯುವಕರು, ಆತ ಮುಸ್ಲಿಂ ಬಾಲಕಿಯನ್ನು ಪ್ರೀತಿಸುತ್ತಿದ್ದಾನೆ ಎಂದು ತಪ್ಪು ಭಾವಿಸಿದ್ದಾರೆ. ‘ಇವರು ನಮ್ಮೂರಿನವರು, ನಾನು ಇವರನ್ನು ಮನೆಗೆ ಕರೆದೊಯ್ಯಲು ಬಂದಿದ್ದೇನೆ’ ಎಂದು ವೆಂಕಟೇಶ ಎಷ್ಟೇ ಬೇಡಿಕೊಂಡರೂ ಕೇಳದ ಯುವಕರ ಗುಂಪು ಆತನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದೆ ಎನ್ನುವ ಆರೋಪ ಕೇಳಿಬಂದಿದೆ.

ಹಲ್ಲೆ ನಡೆಸಿದ ಅಮೀರ್, ಖಾಜಾಫೀರ್, ಇಂದ್ರಾವಲಿ ಹಾಗೂ ಎಸ್‌ಡಿಪಿಐ ಸಂಘಟನೆಯ ಕೆಲವು ಕಾರ್ಯಕರ್ತರು ವೆಂಕಟೇಶನ ಮೊಬೈಲ್ ಕಸಿದುಕೊಂಡು, ಆತ ಬಾಲಕಿಯನ್ನು ಪ್ರೀತಿಸುತ್ತಿರುವುದಾಗಿ ಬಲವಂತವಾಗಿ ಒಪ್ಪಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ವೆಂಕಟೇಶನ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಲಾಗಿದೆ.

ತನ್ನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ವೆಂಕಟೇಶ ಗಂಗಾವತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ವಿಷಯ ತಿಳಿಯುತ್ತಿದ್ದಂತೆ ಠಾಣೆಗೆ ಲಗ್ಗೆ ಇಟ್ಟ ಎಸ್‌ಡಿಪಿಐ ಸದಸ್ಯರು ಮತ್ತು ಮುಸ್ಲಿಂ ಯುವಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಕೇವಲ ನಮ್ಮವರ ಮೇಲೆ ಯಾಕೆ ಕೇಸ್ ದಾಖಲಿಸಿದ್ದೀರಿ ಎಂದು ಪ್ರಶ್ನಿಸಿ, ವೆಂಕಟೇಶನ ವಿರುದ್ಧವೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಗಲಾಟೆ ನಡೆಸಿದ್ದಾರೆ.

ಸದ್ಯ ವೆಂಕಟೇಶ ನೀಡಿದ ದೂರಿನನ್ವಯ ಹಲ್ಲೆಕೋರರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.