ಬೆಂಗಳೂರು : ಸಂಪುಟ ವಿಸ್ತರಣೆ ಆಗಲೇಬೇಕು. ಹೊಸಬರಿಗೆ ಅವಕಾಶ ಸಿಗಬೇಕು ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಒತ್ತಾಯಿಸಿದ್ದಾರೆ.
ಈ ಕುರಿತು ಬೆಂಗಳೂರಲ್ಲಿ ಮಾತನಾಡಿದ ಅವರು, ಸರ್ಕಾರ ಬಂದು ಮೂರು ವರ್ಷ ಆಗಿದೆ. ಬದಲಾವಣೆ ಒಳ್ಳೆಯದು ಎಂದಿದ್ದಾರೆ. ಸಿಎಂ ಬದಲಾವಣೆ, ಪವರ್ ಶೇರಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಈ ವಿಚಾರವಾಗಿ ಸಾಕಷ್ಟು ಚರ್ಚೆಗಳಾಗಿವೆ. ನಾನು ಮಾತನಾಡಿ ವಿವಾದ ದೊಡ್ಡದಾಗಿಸಲ್ಲ. ಸಿದ್ದರಾಮಯ್ಯ ನಮ್ಮ ಲೀಡರ್, ಅವರ ಕೆಲಸಗಳು ಪಕ್ಷಕ್ಕೆ ಬಲ ತಂದಿವೆ. ಅವರಿಗೆ ನಾನೊಬ್ಬ ಸಪೋರ್ಟ್ ಮಾಡಿದರೆ ಏನೂ ಆಗಲ್ಲ ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತ ನಿಗಮದ ಸಾಲಮನ್ನ ವಿಚಾರವಾಗಿ ಮಾತನಾಡಿದ ಅವರು, ಆ ನಿಗಮದವರು ಬೇಡಿಕೆ ಇಟ್ಟಿದ್ದಾರೆ. ಸಿಎಂ ಅದನ್ನು ಪರಿಶೀಲಿಸಿ ಮಾಫಿ ಮಾಡಿದ್ದಾರೇನೋ. ಬೇರೆ ಸಮುದಾಯದವರು ಬೇಡಿಕೆ ಇಟ್ರೆ ಅದಕ್ಕೆ ಅವರು ಒಪ್ಪಬಹುದೇನೋ. ಅಲ್ಪಸಂಖ್ಯಾತರ ವಿಚಾರ ಬಂದಾಗ ಈ ಪ್ರಶ್ನೆಗಳು ಉದ್ಭವಿಸುತ್ತವೆ. ಹೀಗ್ಯಾಕೆ?. ಅವರು ಭಾರತ ದೇಶದ ಪ್ರಜೆಗಳಲ್ವೇ? ಪದೇ ಪದೆ ಈ ರೀತಿ ಅವರನ್ನು ಭಿನ್ನವಾಗಿ ನೋಡೋದು ಸರಿಯಲ್ಲ ಎಂದಿದ್ದಾರೆ.
ಸಾವರ್ಕರ್ಗೆ ಭಾರತರತ್ನ ಕೊಡಬೇಕು ಎನ್ನುವ ಭಾಗವತ್ ಹೇಳಿಕೆ ವಿಚಾರವಾಗಿ ಮಾತನಾಡಿ, ಭಾರತ ರತ್ನ ಗೌರವಕ್ಕೆ ಅವರು ಅರ್ಹರೇ ಅನ್ನೋದನ್ನೇ ಮೊದಲು ನೋಡಬೇಕು. ಬ್ರಿಟೀಷರ ಜೊತೆ ಕೈ ಜೋಡಿಸಿ, ಅವರ ಫೆನ್ಷನ್ ಮೇಲೆ ಬದುಕಿದವರಿಗೆ, ಕ್ಷಮಾಪಣೆ ಬರೆದವರಿಗೆ ಭಾರತ ರತ್ನ ಕೊಡಬೇಕೇ ಯೋಚಿಸಿ?. ಅವರ ಸರ್ಕಾರ ಇರೋದು, ಬೇಕಾದವರಿಗೆ ಭಾರತ ರತ್ನ ಕೊಡಬಹುದು. ಅವರಿಗೆ ಒಂದು ವೇಳೆ ಆ ಗೌರವ ಕೊಟ್ರೆ, ಭಾರತದ ಸ್ವಾತಂತ್ರಕ್ಕಾಗಿ ಹೋರಾಡಿದವರಿಗೆ ಮಾಡೋ ಅಪಮಾನ ಇದು. ಗೋಡ್ಸೆ ಆರಾಧಕರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.



