ಯಾದಗಿರಿ: ಅಪ್ರಾಪ್ತ ಬಾಲಕಿಯ ಜೊತೆ ಅನುಚಿತವಾಗಿ ವರ್ತನೆ ಹಿನ್ನೆಲೆ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಯಮನೂರಪ್ಪ ಮುತ್ಯಾನ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಬಂಧನದ ಭೀತಿ ಹಿನ್ನೆಲೆ ಪ್ರಕರಣ ದಾಖಲಾಗುತ್ತಿದ್ದಂತೆ ಮುತ್ಯಾ ನಾಪತ್ತೆಯಾಗಿದ್ದು, ತಲೆಮರೆಸಿಕೊಂಡಿರುವ ಸುದ್ದಿ ಹರಿದಾಡಿವೆ. ಘಟನೆ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗ ಕೂಡ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಕಾರಣ ಸ್ವಯಂ ಘೋಷಿತ ದೇವಮಾನವನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಶಹಾಪುರ ತಾಲೂಕಿನ ಗೋಗಿ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲು ಹಿನ್ನೆಲೆ ಮಹಲ್ ರೋಜಾದಲ್ಲಿರುವ ಮಠದಲ್ಲಿ ಪೊಲೀಸರು ಸ್ಥಳ ಮಹಜರು ಕಾರ್ಯ ನಡೆಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಸಮ್ಮುಖದಲ್ಲಿ ಮುತ್ಯಾ ಮಠದ ಎಲ್ಲಾ ಕೋಣೆಗಳಲ್ಲಿ ಮಹಜರು ನಡೆಸಲಾಗಿದೆ. ಪ್ರಕರಣದ ತನಿಖೆಗೆ ಶಹಾಪುರ ಸಿಪಿಐ ಶರಣಗೌಡ ನ್ಯಾಮಣ್ಣನವರ ನೇಮಕ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಮಲ್ಲಿಕಾರ್ಜುನ ಮುತ್ಯಾಗೆ ಪೊಲೀಸರು ನೋಟಿಸ್ ನೀಡಲಿದ್ದಾರೆ ಎನ್ನಲಾಗಿದೆ.



