ಹೊಸದಿಲ್ಲಿ: ಮಧ್ಯಪ್ರಾಚ್ಯದ ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಅರಬ್ ರಾಷ್ಟ್ರಗಳ ಒಕ್ಕೂಟದೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ ನಾಗರಿಕರ ಸುರಕ್ಷತೆಗೆ ಒತ್ತು ಕೊಡುವಂತೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರೊಂದಿಗೂ ಟೆಲಿಫೋನ್ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಪ್ರಧಾನಿ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
“ಯುಎಇ ಅಧ್ಯಕ್ಷರಾದ ನನ್ನ ಸಹೋದರ ಶೇಖ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್” ಅವರೊಂದಿಗೆ ಮಾತನಾಡಿದ್ದೇನೆ. ಯುಎಇ ಮೇಲೆ ಆಗಿರುವ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದೇನೆ. ಈ ದಾಳಿಯಲ್ಲಾದ ಜೀವಹಾನಿ ಬಗ್ಗೆ ಬೇಸರವಾಗಿದೆ. ಈ ಕಷ್ಟದ ಸಮಯದಲ್ಲಿ ಭಾರತವು ಯುಎಇಯೊಂದಿಗೆ ಇರಲಿದೆ. ಅರಬ್ ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರ ಕಾಳಜಿ ವಹಿಸಿದ್ದಕ್ಕಾಗಿ ಧನ್ಯವಾದ ತಿಳಿಸಿದ್ದೇನೆ. ಸ್ಥಳೀಯ ಶಾಂತಿ, ಸುರಕ್ಷತೆ, ಭದ್ರತೆಗೆ ನಮ್ಮ ಸಹಕಾರವಿದೆ ಎಂದಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ.
ಇದಲ್ಲದೆ, ಇರಾನ್ ಮೇಲೆ ಅಮೆರಿಕ ಜೊತೆ ಸೇರಿ ಸಂಘರ್ಷ ಆರಂಭಿಸಿದ ಇಸ್ರೇಲ್ ಪ್ರಧಾನಿ ಜೊತೆಗೂ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ” ಪ್ರಸ್ತುತ ಪ್ರಾದೇಶಿಕ ಪರಿಸ್ಥಿತಿಯ ಕುರಿತು ಚರ್ಚೆ ಮಾಡಲು ಪ್ರಧಾನಜ ಬೆಂಜಮಿನ್ ನೆತನ್ಯಾಹು ಜೊತೆ ದೂರವಾಣಿ ಕರೆಮಾಡಿ ಮಾತನಾಡಿದೆ. ಇ ಬೆಳವಣಿಗೆಗಳ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿದೆ. ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡಲು ಒತ್ತಿ ಹೇಳಿದೆ. ಅಲ್ಲದೆ ಈ ಸಂಘರ್ಷವನ್ನು ಶೀಘ್ರ ನಿಲ್ಲಿಸುವ ಬಗ್ಗೆ ಭಾರತ ಪುನರುಚ್ಛರಿಸಿದೆ” ಎಂದಿದ್ದಾರೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನತೆ ಹಿನ್ನಲೆ ಭಾರತದ ಕಳವಳ ಹಾಗೂ ನಿಲುವನ್ನು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ.
ದೇಶದ 1 ಕೋಟಿಗೂ ಹೆಚ್ಚು ಜನ ವಿವಿಧ ದೇಶಗಳಲ್ಲಿ ಇದ್ದು, ಇರಾನ್ ಸೇರಿ ಮಧ್ಯಪ್ರಾಚ್ಯ, ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಸಮಾಲೋಚನ ಸಭೆಯನ್ನು ನಡೆಸಿದ್ದಾರೆ.
ದೇಶದಲ್ಲಿ , ಇರಾನ್ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ನಡೆದ ಪ್ರತಿಭಟನೆಗಳು, ಶಾಂತಿ ಕಾಯ್ದುಕೊಳ್ಳಲು ಬೇಕಾದ ಭದ್ರತಾ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಈಗಾಗಲೇ ಸೂಚಿಸಲಾಗಿದೆ. ದೇಶದ ಗಡಿ ಭಾಗಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ವಾಣಿಜ್ಯ-ವಹಿವಾಟಿನ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆಯೂ ಚರ್ಚಿಸಲಾಗಿದೆ..


