ಭಾರತದ ಮುಸ್ಲಿಮರ ಪರ ಧ್ವನಿ ಎತ್ತಿದ್ದ ಖಮೇನಿ, ಇರಾನ್‌ಗೆ ಮುಳುವಾಯಿತಾ?
ನವದೆಹಲಿ: ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತ್ಯೆ ಮಾಡಿದ್ದಕ್ಕೆ ಇಸ್ರೇಲ್, ಅಮೆರಿಕವನ್ನು ಭಾರತ ಯಾಕೆ ಇನ್ನೂ ಖಂಡಿಸಿಲ್ಲ ಎಂಬ ಪ್ರಶ್ನೆ ಈಗ ದೊಡ್ಡ ಚರ್ಚೆಯ ವಿಚಾರ.
ಹಾಗೆ ನೋಡಿದರೆ ಭಾರತ ಮತ್ತು ಇರಾನ್ ಸಂಬಂಧ ಚೆನ್ನಾಗಿಯೇ ಇದೆ. ಈ ಹಿಂದೆ ಅಮೆರಿಕ ಇರಾನ್ ಮೇಲೆ ಹಲವು ಆರ್ಥಿಕ ನಿರ್ಬಂಧ ಹೇರಿದ್ದರೂ ಭಾರತ ಇರಾನ್‌ನಿಂದ ಕಚ್ಚಾ ತೈಲವನ್ನು ಖರೀದಿಸುತ್ತಿತ್ತು.
ಇರಾನಿನ ಚಾಬಹಾರ್ ಬಂದರನ್ನು 10 ವರ್ಷ ನಿರ್ವಹಣೆ ಮಾಡುವ ಕುರಿತು ಮಹತ್ವದ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. 2016 ಮೋದಿ ಟೆಹ್ರಾನ್‌ಗೆ ಭೇಟಿ ನೀಡಿ ಖಮೇನಿ ಜೊತೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ವಿದೇಶದಲ್ಲಿರುವ ಬಂದರಿನ ನಿರ್ವಹಣೆಗೆ ಭಾರತ ಮುಂದಾದ ಮೊದಲ ಪ್ರಕರಣ ಇದು. ಪಾಕಿಸ್ತಾನವನ್ನು ಸಂಪರ್ಕಿಸದೆಯೇ ಭಾರತ-ಇರಾನ್- ಆಫ್ಘಾನಿಸ್ತಾನ ನಡುವಣ ವ್ಯಾಪಾರ ವಹಿವಾಟಿಗೆ ಹೊಸ ಮಾರ್ಗವನ್ನೂ ತೆರೆಯಲಿದೆ.
ಅರಬ್ಬಿ ಸಮುದ್ರ ಮತ್ತು ಪರ್ಷಿಯನ್ ಕೊಲ್ಲಿಯ ಹಲವು ಬಂದರುಗಳನ್ನು ಚೀನಾ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆ ಮೂಲಕ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ. ಈ ಕಾರಣಕ್ಕೆ ಚಾಬಹಾರ್ ಬಂದರು ನಿಯಂತ್ರಣಕ್ಕೆ ಬಂದರೆ ಈ ಪ್ರದೇಶದಲ್ಲಿ ಚೀನಾ ಪ್ರಾಬಲ್ಯಕ್ಕೆ ತಡೆ ಒಡ್ಡಿದಂತೆ ಆಗುತ್ತದೆ ಎಂಬ ದೂರದೃಷ್ಟಿಯನ್ನು ಇಟ್ಟುಕೊಂಡು ಚಾಬಹಾರ್ ಬಂದರು ನಿರ್ವಹಣೆಗೆ ಮುಂದಾಗಿತ್ತು.
ಭಾರತವು ಒಂದು ಕಾಲದಲ್ಲಿ ಇರಾನ್‌ನ ಎರಡನೇ ಅತಿದೊಡ್ಡ ತೈಲ ಖರೀದಿದಾರ ರಾಷ್ಟ್ರವಾಗಿತ್ತು. ಹೀಗಿದ್ದರೂ 2018 ರಲ್ಲಿ ಅಮೆರಿಕ ಪರಮಾಣು ಒಪ್ಪಂದದಿಂದ ಹಿಂದೆ ಸರಿದ ನಂತರ ಮತ್ತು ಹಲವು ನಿರ್ಬಂಧ ವಿಧಿಸಿದ ಬಳಿಕ ಭಾರತ 2019 ರ ಮಧ್ಯಭಾಗದ ನಂತರ ತೈಲ ಆಮದು ಮಾಡುವುದನ್ನು ನಿಲ್ಲಿಸಿತ್ತು.
2018-19 ರಲ್ಲಿ ಭಾರತ ಮತ್ತು ಇರಾನ್ ಮಧ್ಯೆ 17 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ನಡೆದಿದ್ದರೆ 2024-25ರ ವೇಳೆಗೆ ಇದು 1.68 ಬಿಲಿಯನ್ ಡಾಲರ್‌ಗೆ ಇಳಿಕೆಯಾಗಿತ್ತು. ಭಾರತ ಇರಾನಿಗೆ ಬಾಸ್ಮತಿ ಅಕ್ಕಿ ಭಾರೀ ಪ್ರಮಾಣದಲ್ಲಿ ರಫ್ತು ಮಾಡುತ್ತಿದೆ. 2025–26ರಲ್ಲಿ ಸುಮಾರು 756 ಡಾಲರ್ ಮೌಲ್ಯದ ಅಕ್ಕಿಯನ್ನು ರಫ್ತು ಮಾಡಿದೆ. ಉಳಿದಂತೆ ಚಹಾ, ಬಾಳೆಹಣ್ಣು, ಔಷಧಗಳು ಮತ್ತು ಸಕ್ಕರೆಯನ್ನು ರಫ್ತು ಮಾಡುತ್ತಿದೆ.
ಕಚ್ಚಾ ತೈಲ ಖರೀದಿಗೆ ನಿರ್ಬಂಧ ಇರುವ ಕಾರಣ ಇರಾನ್‌ನಿಂದ ಭಾರತ ಸೇಬು, ಪಿಸ್ತಾ, ಬಾದಾಮಿ, ವಾಲ್ನಟ್, ಖರ್ಜೂರ, ರಾಸಾಯನಿಕ, ಖನಿಜಗಳು, ಪೆಟ್ರೋಲಿಯಂ ಬಿಟುಮೆನ್, ತಾಮ್ರ, ಸತುವನ್ನು ಆಮದು ಮಾಡಿಕೊಳ್ಳುತ್ತಿದೆ.
ಎರಡು ದೇಶಗಳ ಮಧ್ಯೆ ವ್ಯಾಪಾರ ವಹಿವಾಟು ನಡೆಯುತ್ತಿದ್ದರೂ 2017 ರಿಂದ 2024 ರವರೆಗೆ ಖಮೇನಿ ನಾಲ್ಕು ಬಾರಿ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಿದ್ದರು. ಹಸ್ತಕ್ಷೇಪಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿ ಪ್ರತಿ ಬಾರಿಯೂ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇರಾನಿನ ರಾಯಭಾರಿಗೆ ಸಮನ್ಸ್ ಜಾರಿ ಮಾಡಿತ್ತು
370ನೇ ವಿಧಿ ರದ್ದು ಮಾಡಿದ್ದಕ್ಕೆ ಟೀಕಿಸಿದ್ದ ಖಮೇನಿ, ಕಾಶ್ಮೀರದಲ್ಲಿನ ಮುಸ್ಲಿಮರ ಪರಿಸ್ಥಿತಿಯ ಬಗ್ಗೆ ನಮಗೆ ಕಳವಳವಿದೆ. ಮುಸ್ಲಿಮರ ಮೇಲಿನ ದಬ್ಬಾಳಿಕೆ ತಡೆಯಬೇಕಿದೆ ಎಂದು ಆಗ್ರಹಿಸಿದ್ದರು.
2020 ರ ದೆಹಲಿ ಗಲಭೆಯ ಸಮಯದಲ್ಲಿ, ಅವರು ಉಗ್ರಗಾಮಿ ಹಿಂದೂಗಳಿಂದ ಮುಸ್ಲಿಮರ ಹತ್ಯಾಕಾಂಡ ಟ್ವೀಟ್ ಮಾಡಿದ್ದು ಅಲ್ಲದೇ #IndianMuslimsInDanger ಎಂದು ಹ್ಯಾಶ್ ಟ್ಯಾಗ್ ಬಳಸಿದ್ದರು.
ಇರಾನಿನ ಸಂಸತ್ತು ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಮ್ ವಿರೋಧಿ ಎಂದು ಟೀಕಿಸಿತ್ತು. 2024ರ ಸೆಪ್ಟೆಂಬರ್‌ನಲ್ಲಿ ಮ್ಯಾನ್ಮಾರ್, ಗಾಜಾ, ಭಾರತ ಅಥವಾ ಇನ್ನಾವುದೇ ಸ್ಥಳದಲ್ಲಿ ಮುಸ್ಲಿಂ ಅನುಭವಿಸುತ್ತಿರುವ ನೋವುಗಳನ್ನು ನಾವು ಅರಿಯದಿದ್ದರೆ ನಾವು ನಮ್ಮನ್ನು ಮುಸ್ಲಿಮರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
ಪಶ್ಚಿಮ ಏಷ್ಯಾದ ಪರಿಸ್ಥಿತಿ ತೀವ್ರ ಕಳವಳಕಾರಿ ವಿಷಯ ಎಂದು ಪ್ರಧಾನಿ ಮೋದಿ ಇಂದು ಹೇಳಿದ್ದಾರೆ. ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಭಾರತ ಶಾಂತಿ ಮತ್ತು ಸ್ಥಿರತೆಗಾಗಿ ನಿಲ್ಲುತ್ತದೆ. ತಹ ವಿವಾದಗಳಿಗೆ ಮಾತುಕತೆಯ ಮೂಲಕ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
ಇರಾನ್ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಯುಇಎ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ನೆಹ್ಯಾನ್, ಬಹರೇನ್ ದೊರೆ ಹಮೀದ್ ಬಿನ್ ಅಸಾ ಅಲ್ ಖಲೀಫಾ, ಸೌದಿಯ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಅಷ್ಟೇ ಅಲ್ಲದೇ ಈ ದೇಶಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ

