ಬೀದರ್: ಬೀದರ್ ಜಿಲ್ಲೆಯ ಐತಿಹಾಸಿಕ ನಗರಿ ಬಸವಕಲ್ಯಾಣದಲ್ಲಿ ತಡರಾತ್ರಿ ಭಾರಿ ಹೈಡ್ರಾಮಾ ನಡೆದಿದೆ.
ಮುಸ್ಲಿಂ ಮೌಲ್ವಿಗಳ ಮೇಲೆ ಹಿಂದೂ ಯುವಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ, ಆಕ್ರೋಶಗೊಂಡ ಸಾವಿರಾರು ಮುಸ್ಲಿಂ ಸಮುದಾಯದ ಜನರು ಬಸವಕಲ್ಯಾಣ ನಗರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಜನರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದ್ದು, ಇಡೀ ನಗರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಮಾಹಿತಿಯ ಪ್ರಕಾರ, ಕೆಲವು ಹಿಂದೂ ಯುವಕರು ಮುಸ್ಲಿಂ ಮೌಲ್ವಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ವಿಚಾರ ನಗರದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಇದರಿಂದ ಕೆರಳಿದ ಮುಸ್ಲಿಂ ಸಮುದಾಯದ ಸಾವಿರಾರು ಯುವಕರು ಮತ್ತು ಮುಖಂಡರು ನಗರದ ಗಾಂಧಿ ವೃತ್ತದಲ್ಲಿರುವ ಪೊಲೀಸ್ ಠಾಣೆಯತ್ತ ಧಾವಿಸಿದ್ದಾರೆ. ‘ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ ನಮ್ಮ ವಶಕ್ಕೆ ನೀಡಬೇಕು’ ಎಂದು ಪಟ್ಟು ಹಿಡಿದ ಪ್ರತಿಭಟನಾಕಾರರು ಠಾಣೆಯ ಮುಂಭಾಗದಲ್ಲಿ ಭಾರಿ ಗದ್ದಲ ಸೃಷ್ಟಿಸಿದರು.
ಸಾವಿರಾರು ಜನರು ಏಕಾಏಕಿ ಠಾಣೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಗುಂಪನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಜಮಾವಣೆಗೊಂಡಿದ್ದ ಜನರನ್ನು ಚದುರಿಸಲು ಪೊಲೀಸರು ಅನಿವಾರ್ಯವಾಗಿ ಲಘು ಲಾಠಿ ಪ್ರಹಾರ ನಡೆಸಿದರು. ಈ ಸಂಘರ್ಷದ ವೇಳೆ ಜಮಾವಣೆಗೊಂಡಿದ್ದ ಜನರು ಠಾಣೆಯಲ್ಲಿದ್ದ ವಸ್ತುಗಳನ್ನು ಹಾನಿಗೊಳಿಸಿದ್ದಾರೆ. ಇದರಿಂದ ಪೊಲೀಸ್ ಇಲಾಖೆಗೆ ಸೇರಿದ ಕೆಲವು ಪೀಠೋಪಕರಣ ಹಾಗೂ ವಸ್ತುಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.


