Flash News

ದಾವಣಗೆರೆ ದಕ್ಷಿಣ ಕ್ಷೇತ್ರದ ಬಗ್ಗೆ ಮಾತಾಡಲು ಜಮೀರ್‌ ಯಾರು?: ಎಸ್‌.ಎಸ್.ಮಲ್ಲಿಕಾರ್ಜುನ್‌

ದಾವಣಗೆರೆ: ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್‌ನಲ್ಲಿ ಆಕ್ರೋಶ ಭುಗಿಲೆದ್ದಿದ್ದು ಸಚಿವರಾದ ಜಮೀರ್ ಖಾನ್ ಮತ್ತು ಎಸ್‌.ಎಸ್.ಮಲ್ಲಿಕಾರ್ಜುನ್‌ ಮಾತಿನ ಕದನ ನಡೆದಿದೆ.

ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಡಬೇಕೆಂಬ ಸಚಿವ ಜಮಿರ್ ಖಾನ್ ಮಾತಿಗೆ ದಾವಣಗೆರೆಯಲ್ಲಿ ತಿರುಗೇಟು ನೀಡಿರುವ ಸಚಿವ ಮಲ್ಲಿಕಾರ್ಜುನ್, ಉಪಚುನಾವಣಾ ಸಮಿತಿಯ ಸಂಚಾಲಕ ಮಂಜುನಾಥ ಭಂಡಾರಿ ಅವರು ತೀರ್ಮಾನಿಸುತ್ತಾರೆ. ದಾವಣಗೆರೆ ಕ್ಷೇತ್ರದ ಬಗ್ಗೆ ನಿರ್ಧಾರ ಮಾಡಲು ಇವನ್ಯಾರು ಎಂದೆಲ್ಲ ಏಕವಚನದಲ್ಲೇ ಜಮೀರ್ ವಿರುದ್ಧ ಹರಿಹಾಯ್ದಿದ್ದಾರೆ.

ಅಲ್ಪಸಂಖ್ಯಾತರು ನನ್ನನ್ನೇ ಕೇಳಬೇಕಲ್ಲವೇ?:
ಇದಕ್ಕೆ ಬೆಂಗಳೂರಿನಲ್ಲಿ ಸೋಮವಾರ ಪ್ರತಿಕ್ರಿಯಿಸಿರುವ ಸಚಿವ ಜಮೀರ್, ನಾನು ದಾವಣಗೆರೆಗೆ ಹೋದಾಗ ಕೆಲ ಅಲ್ಪಸಂಖ್ಯಾತ ಮುಖಂಡರು ನನ್ನನ್ನು ಭೇಟಿ ಮಾಡಿದ್ದರು. ಬೆಂಗಳೂರಿನಲ್ಲೂ ಭೇಟಿ ಮಾಡಿದ್ದರು. ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಕೊಡಿಸಬೇಕು ಎಂದು ಒತ್ತಡ ಹಾಕಿದರು. ಅದನ್ನೇ ಹೇಳಿದ್ದೇನೆ ಎಂದರು.

ಶಾಮನೂರು ಶಿವಶಂಕರಪ್ಪ ಇರುವಾಗ, ಇದು ನನ್ನ ಕೊನೆಯ ಚುನಾವಣೆ. ಮುಂದೆ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟು ನಾನೇ ಗೆಲ್ಲಿಸಿಕೊಂಡು ಬರುತ್ತೇನೆ ಎಂದಿದ್ದರಂತೆ. ಅಜ್ಜ ಗಟ್ಟಿಮುಟ್ಟಾಗಿದ್ದರು. ಇಷ್ಟು ಬೇಗ ನಮ್ಮನ್ನೆಲ್ಲಾ ಬಿಟ್ಟು ಹೋಗುತ್ತಾರೆ ಎಂದುಕೊಂಡಿರಲಿಲ್ಲ. ನಾನೊಬ್ಬ ಅಲ್ಪಸಂಖ್ಯಾತ ನಾಯಕ. ಅಲ್ಪಸಂಖ್ಯಾತರು ನನನ್ನೇ ಕೇಳಬೇಕಲ್ಲವೇ? ಕ್ಷೇತ್ರದಲ್ಲಿ ಅಲ್ಪಸಂಖ್ಯಾತರದ್ದು 80 ಸಾವಿರ ಮತಗಳಿವೆ. ಟಿಕೆಟ್ ಕೊಡಿಸಿ ಎಂದಿದ್ದಾರೆ. ಟಿಕೆಟ್ ಕೊಡುವವನು ನಾನಾ? ನಾನು ಏನಿದ್ದರೂ ಹೈಕಮಾಂಡ್‌ಗೆ ವರದಿ ಕೊಡುತ್ತೇನೆ. ಹೈಕಮಾಂಡ್ ಟಿಕೆಟ್ ಕೊಡುತ್ತದೆ ಎಂದರು.

ಅಲ್ಪಸಂಖ್ಯಾತರು ಟಿಕೆಟ್ ಕೇಳುವುದರಲ್ಲಿ ತಪ್ಪೇನಿದೆ?: ಜಮೀರ್‌

ನನ್ನ ಕ್ಷೇತ್ರ, ಅವರ ಕ್ಷೇತ್ರ ಎಂದೆಲ್ಲ ಇಲ್ಲ. ಚಾಮರಾಜಪೇಟೆಯನ್ನು ನನ್ನ ಕ್ಷೇತ್ರ ಎನ್ನಲಾಗುತ್ತದೆಯೇ? 224 ಕ್ಷೇತ್ರವೂ ಕಾಂಗ್ರೆಸ್‌ ಹೈಕಮಾಂಡ್ ಕ್ಷೇತ್ರ. ಅದನ್ನು ನಾನಾಗಲೀ, ಮಲ್ಲಿಕಾರ್ಜುನ ಆಗಲೀ ತೀರ್ಮಾನಿಸಲು ಯಾರೂ ಅಲ್ಲ. ನಾವು ಕೇಳಬಾರದು ಎಂದೆಲ್ಲಾ ಇದೆಯೇ? ಕೇಳುವುದರಲ್ಲಿ ತಪ್ಪೇನಿದೆ? ಒಂದು ಸಮಾಜ ಒತ್ತಡ ಹಾಕಿ ಎಂದಿದ್ದಾರೆ. ಆ ಕಾರಣಕ್ಕಾಗಿ ನಾನು ಕೇಳುತ್ತಿದ್ದೇನೆ. ಇನ್ನೂ ಒತ್ತಡ ಹಾಕುತ್ತೇನೆ. ಅಂತಿಮವಾಗಿ ನಿರ್ಧಾರ ಹೈಕಮಾಂಡ್ ಮಾಡುತ್ತದೆ. ಅದು ಕಾಂಗ್ರೆಸ್ ಭದ್ರಕೋಟೆ.

ಈ ಹಿಂದೆ ಸೈಫುಲ್ಲಾ ಎಂಬುವರಿಗೆ ಬಿ ಫಾರಂ ಕೊಟ್ಟಿತ್ತು. ಅಲ್ಪಸಂಖ್ಯಾತರು ಟಿಕೆಟ್ ಕೇಳುತ್ತಿರುವುದು ಇದೇ ಮೊದಲಲ್ಲ. ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲುತ್ತೇವೆ. ಚಾಮರಾಜಪೇಟೆಯಲ್ಲಿ ಬೇರೆ ಯಾರಾದರೂ ಅಲ್ಪಸಂಖ್ಯಾತರು ಕೇಳಿದರೆ ಬಿಟ್ಟುಕೊಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿ ಸಚಿವ ಜಮೀರ್, ನಾನು ಶಾಮನೂರು ಶಿವಶಂಕರಪ್ಪ ರೀತಿ ಮೊದಲೇ ಹೇಳಿದ್ದಿದ್ದರೆ ಬಿಟ್ಟುಕೊಡುತ್ತೇನೆ ಎಂದು ಪ್ರತಿಕ್ರಿಯಿಸಿದರು.

ನಮ್ಮ ಕ್ಷೇತ್ರದ ಬಗ್ಗೆ ಮಾತನಾಡಲು ಜಮೀರ್‌ ಯಾರು?: ಮಲ್ಲಿಕಾರ್ಜುನ್‌
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಗ್ಗೆ ಮಾತನಾಡಲು ವಸತಿ ಸಚಿವ ಜಮೀರ್‌ ಅಹಮ್ಮದ್‌ ಯಾರು? ಎಂದು ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಜಮೀರ್‌ ಅಹಮದ್‌ ಮಧ್ಯಪ್ರವೇಶ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಗರಂ ಆಗಿ ಪ್ರತಿಕ್ರಿಯಿಸಿದರು. ಈ ಕ್ಷೇತ್ರದಲ್ಲಿಅಲ್ಪಸಂಖ್ಯಾತರಿಗೆ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂಬ ಬೇಡಿಕೆಗೆ ದನಿಗೂಡಿಸಲು ಅವರು ಯಾರು? ಅದು ನಮ್ಮ ಕ್ಷೇತ್ರ. ಸಚಿವರಾಗಿ ಈ ರೀತಿ ಮಾತೋಡೋದು ಸರಿ ಇರಲ್ಲ ಎಂದು ಆಕ್ರೋಶ ವ್ಯಕ್ತಪಡಿದರು.