ಅಹಮದಾಬಾದ್: ಟಿ20 ವಿಶ್ವಕಪ್ ಗೆದ್ದ ಖುಷಿಯಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಟ್ರೋಫಿಯೊಂದಿಗೆ ಅಹಮದಾಬಾದ್‌ನ ಹನುಮಾನ್ ದೇವಸ್ಥಾನಕ್ಕೆ ಹೋಗಿದ್ದಕ್ಕೆ ಮಾಜಿ ಕ್ರಿಕೆಟಿಗ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದ ಕೀರ್ತಿ ಆಜಾದ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ವಿಶ್ವಕಪ್ ಟ್ರೋಫಿಯನ್ನು ಒಂದು ನಿರ್ದಿಷ್ಟ ಧರ್ಮದ ಗೆಲುವು ಎಂದು ಬಿಂಬಿಸಬಾರದು ಎಂದು ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಇದಾದ ನಂತರ, ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಬಿಸಿಸಿಐ ಮಾಜಿ ಕಾರ್ಯದರ್ಶಿ ಹಾಗೂ ಹಾಲಿ ಐಸಿಸಿ ಅಧ್ಯಕ್ಷ ಜಯ್ ಶಾ ಮತ್ತು ಹೆಡ್ ಕೋಚ್ ಗೌತಮ್ ಗಂಭೀರ್ ಅವರು ಟ್ರೋಫಿಯೊಂದಿಗೆ ಅಹಮದಾಬಾದ್‌ನ ಹನುಮಾನ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಇದರ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ, 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಕೀರ್ತಿ ಆಜಾದ್ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ನಾವು ವಿಶ್ವಕಪ್ ಗೆದ್ದಾಗ, ನಮ್ಮ ತಂಡದಲ್ಲಿ ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಆಟಗಾರರಿದ್ದರು. ನಾವು ಆ ಟ್ರೋಫಿಯನ್ನು ನಮ್ಮ ತಾಯ್ನಾಡು ಭಾರತಕ್ಕೆ ತಂದಿದ್ದೆವು. ಭಾರತ ಗೆದ್ದ ವಿಶ್ವಕಪ್ ಟ್ರೋಫಿಯನ್ನು ಯಾಕೆ ಹೀಗೆ ಒಂದು ಧರ್ಮಕ್ಕೆ ಸೀಮಿತಗೊಳಿಸುತ್ತಿದ್ದೀರಿ? ಈ ತಂಡ ಭಾರತವನ್ನು ಪ್ರತಿನಿಧಿಸುತ್ತದೆಯೇ ಹೊರತು, ಸೂರ್ಯಕುಮಾರ್ ಯಾದವ್ ಅಥವಾ ಜಯ್ ಶಾ ಅವರ ಕುಟುಂಬವನ್ನಲ್ಲ. ಮೊಹಮ್ಮದ್ ಸಿರಾಜ್ ಈ ಟ್ರೋಫಿಯನ್ನು ಮಸೀದಿಗೆ ತೆಗೆದುಕೊಂಡು ಹೋಗಿ ಪ್ರದರ್ಶಿಸಿಲ್ಲ. ವಿಶ್ವಕಪ್‌ನ ಸ್ಟಾರ್ ಆಟಗಾರನಾಗಿದ್ದರೂ ಸಂಜು ಸ್ಯಾಮ್ಸನ್ ಟ್ರೋಫಿಯೊಂದಿಗೆ ಯಾವುದೇ ಚರ್ಚ್‌ಗೆ ಹೋಗಿಲ್ಲ. ಈ ವಿಶ್ವಕಪ್ ಎಲ್ಲಾ ಧರ್ಮಗಳನ್ನು ನಂಬುವ 140 ಕೋಟಿ ಭಾರತೀಯರಿಗೆ ಸೇರಿದ್ದು. ಇದು ಕೇವಲ ಒಂದು ಧರ್ಮದ ಗೆಲುವಲ್ಲ” ಎಂದು ಕೀರ್ತಿ ಆಜಾದ್ ‘ಎಕ್ಸ್’ ನಲ್ಲಿ ಬರೆದುಕೊಂಡಿದ್ದಾರೆ.
ವಿಶ್ವಕಪ್ ಗೆದ್ದ ಸಂಭ್ರಮದ ನಡುವೆ ಟ್ರೋಫಿಯನ್ನು ದೇವಸ್ಥಾನಕ್ಕೆ ಕೊಂಡೊಯ್ದಿದ್ದು ಸರಿಯಾದ ಕ್ರಮವಲ್ಲ. ಕ್ರೀಡಾ ಸಾಧನೆಗಳನ್ನು ಧಾರ್ಮಿಕ ಆಚರಣೆಗಳೊಂದಿಗೆ ಬೆರೆಸುವುದು ತಂಡದ ಜಾತ್ಯತೀತ ಸ್ವರೂಪಕ್ಕೆ ಧಕ್ಕೆ ತರುತ್ತದೆ ಎಂದು ಕೀರ್ತಿ ಆಜಾದ್ ಹೇಳಿದ್ದಾರೆ. ವಿಶ್ವಕಪ್‌ನಲ್ಲಿ ಭಾರತ ಭರ್ಜರಿ ಪ್ರದರ್ಶನ ನೀಡಿ ಕಿರೀಟ ಗೆದ್ದ ಖುಷಿಯ ನಡುವೆಯೇ ಎದ್ದಿರುವ ಈ ವಿವಾದ, ಅಭಿಮಾನಿಗಳ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.



