ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ತಾರಕಕ್ಕೇರಿರುವ ಸಂಘರ್ಷದ ಪರಿಣಾಮ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ಗಳ ತೀವ್ರ ಕೊರತೆ ಉಂಟಾಗಿದೆ. ಸದ್ಯ ಅದರ ಬಿಸಿ ಬೆಂಗಳೂರಿನ ಪ್ರಸಿದ್ಧ ಬನಶಂಕರಿ ದೇವಾಲಯಕ್ಕೂ ತಟ್ಟಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವ ಹಿನ್ನೆಲೆಯಲ್ಲಿ, ನಿತ್ಯದ ಅನ್ನಪ್ರಸಾದ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.
ನಿತ್ಯವೂ ದೇವಾಲಯದಲ್ಲಿ 3-4 ಸಾವಿರ ಜನರಿಗೆ ಪ್ರಸಾದ ವಿತರಣೆ ಮಾಡಲಾಗುತ್ತಿತ್ತು. ಬೆಳಗ್ಗೆ ಹಾಗೂ ಸಂಜೆ ಪೊಂಗಲ್, ಪುಳಿಯೊಗರೆ, ರೈಸ್ ಬಾತ್ ಹಾಗೂ ಮಧ್ಯಾಹ್ನ ಅನ್ನ ಸಾಂಬರ್ ಹಾಗೂ ಸಂಜೆ ಸಹ ಪ್ರಸಾದ ನೀಡಲಾಗುತ್ತಿತ್ತು. ಪ್ರತಿನಿತ್ಯ ಒಂದರಿಂದ ಎರಡು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೇಕಾಗುತ್ತದೆ. ನಮ್ಮ ಬಳಿ ಸದ್ಯಕ್ಕೆ 4 ಸಿಲಿಂಡರ್‌ಗಳಿದ್ದು, ಇಂದು ಹಾಗೂ ನಾಳೆ ಸಂಜೆಯವರೆಗೂ ಸಾಕಾಗಬಹುದು. ಶುಕ್ರವಾರದಿಂದ ಅನಿವಾರ್ಯವಾಗಿ ನಾವು ಭಕ್ತಾಧಿಗಳಿಗೆ ಪ್ರಸಾದ ನೀಡುವುದನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಬನಶಂಕರಿ ದೇವಾಲಯದ ಇಓ ಕೃಷ್ಣಪ್ಪ ಅವರು ಮಾಹಿತಿ ನೀಡಿದ್ದಾರೆ.
ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಅಭಾವ ನಗರದ ರೆಸ್ಟೋರೆಂಟ್ ಹಾಗೂ ಹೋಟೆಲ್‌ಗಳನ್ನು ಸಂಕಷ್ಟಕ್ಕೆ ತಂದೊಡ್ಡಿದೆ. ಈ ಕಾರಣದಿಂದ ಕೆಲವು ಹೋಟೆಲ್‌ಗಳು ತೆರೆಯಲಾಗದೆ ಬಾಗಿಲು ಹಾಕಿರುವುದು ಬೇಸರದ ವಿಷಯ.ಹೀಗಿದ್ದರೂ ಸಹ ಕನಿಷ್ಠ ಕಾಫಿ, ಟೀ ಮತ್ತು ಅಗತ್ಯವಿರುವಂತಹ ತಿಂಡಿ-ತಿನಿಸುಗಳನ್ನು ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮಲ್ಲಿರುವ ಮೆನುವನ್ನು ಕಡಿಮೆ ಮಾಡಿ ಜನಸಾಮಾನ್ಯರಿಗೆ ತಿಂಡಿ-ತಿನಿಸುಗಳನ್ನು ಉಣಬಡಿಸುವಂತಹ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಗ್ರಾಹಕರರು ಸಹಕರಿಸಬೇಕು ಎಂದು ಬೆಂಗಳೂರು ಹೋಟೆಲ್‌ಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.



