ಬೆಂಗಳೂರು: ಗ್ಯಾರೆಜ್ ಮೇಲ್ಛಾವಣಿಗೆ ಮೋಲ್ಡಿಂಗ್ ಹಾಕುವ ವಿಚಾರಕ್ಕೆ ಮಕ್ಕಳ ಎದುರೇ ಗ್ಯಾರೆಜ್ ಮೆಕಾನಿಕ್ನನ್ನು ಭೀಕರವಾಗಿ ಹತ್ಯೆಗೈದ ಪ್ರಕರಣದಲ್ಲಿ ಮೂವರು ಪ್ರಮುಖ ಆರೋಪಿಗಳು ಸೇರಿ ಏಳು ಮಂದಿಯನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಲ್ಸನ್ ಗಾರ್ಡನ್ನ ಬಡಾ ಮಖಾನ್ ನಿವಾಸಿ ಫರ್ವೀಜ್(36), ಸಮೀರ್(38) ಮತ್ತು ಅಫ್ರಿದಿ ಅಲಿಯಾಸ್ ಅಸ್ಗರ್ (39) ಹಾಗೂ ಇತರೆ ನಾಲ್ವರು ಆರೋಪಿಗಳ ಬಂಧಿಸಲಾಗಿದೆ.
ಆರೋಪಿಗಳು ಮಾ.15ರಂದು ರಾತ್ರಿ 11 ಗಂಟೆ ಸುಮಾರಿಗೆ ಬಡಾ ಮಖಾನ್ ರಸ್ತೆಯಲ್ಲಿ ರಷೀದ್ ಪಾಷಾ (45) ಎಂಬಾತನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಬಡಮಖಾನ್ ರಸ್ತೆಯಲ್ಲಿ ವಕ್ಫ್ ಬೋರ್ಡ್ಗೆ ಸೇರಿದ ವಾಣಿಜ್ಯ ಮಳಿಗೆಗಳಿದ್ದು, ಈ ಪೈಕಿ 10*10 ಜಾಗದಲ್ಲಿ ರಷೀದ್ ಪಾಷಾ ಬೈಕ್ ಗ್ಯಾರೆಜ್ ನಡೆಸುತ್ತಿದ್ದ. ಮೇಲ್ಛಾವಣಿಗೆ ಶೀಟ್ ಅಳವಡಿಸಿದ್ದರಿಂದ ಮೋಲ್ಡ್ ಹಾಕಿಸಲು ರಷೀದ್ ಪಾಷಾ ಮುಂದಾಗಿದ್ದರು. ಈ ವಿಚಾರ ತಿಳಿದ ಇತರೆ ಅಂಗಡಿ ಮಾಲಿಕರು ಹಾಗೂ ಕೆಲ ಕಿಡಿಗೇಡಿಗಳು, ಅಂಗಡಿಗೆ ಸಿಮೆಂಟ್ ಮೋಲ್ಡ್ ಹಾಕಿಸುವಂತಿಲ್ಲ. ಇದು ವಕ್ಫ್ ಬೋರ್ಡ್ಗೆ ಸೇರಿದ ಜಾಗ. ಆ ರೀತಿ ಮಾಡುವಂತಿಲ್ಲ ಎಂದು ಜಗಳ ಮಾಡಿದ್ದರು. ಆದರೆ, ರಷಿದ್ ಪಾಷಾ, ಮಾ. 15 ರಂದು ರಾತ್ರಿ 11 ಗಂಟೆ ಸುಮಾರಿಗೆ ಏಕಾಏಕಿ ಮೋಲ್ಡ್ ಹಾಕಿಸಲು ಮುಂದಾಗಿದ್ದ. ಅದನ್ನು ಗಮನಿಸಿದ ಕೆಲ ಅಂಗಡಿ ಮಾಲಿಕರು ಹಾಗೂ ಇತರರು ಬಂದು ಗಲಾಟೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.
ಮಕ್ಕಳ ಎದುರೇ ತಂದೆಯೇ ಭೀಕರ ಹತ್ಯೆ
ಆರೋಪಿಗಳು ಮತ್ತು ರಷಿದ್ ಪಾಷಾ ನಡುವಿನ ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಆಕ್ರೋಶಗೊಂಡ ಆರೋಪಿಗಳು, ಕ್ರಿಕೆಟ್ ಬ್ಯಾಟ್ ಮತ್ತು ದೊಣ್ಣೆಗಳಿಂದ ರಷಿದ್ ಪಾಷಾ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಆಗ ಕೆಳಗೆ ಬಿದ್ದ ರಷಿದ್ ಪಾಷಾನ ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದೆ. ಆದರೂ ಆರೋಪಿಗಳು ಆತನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವೇಳೆ ರಷಿದ್ ಪಾಷಾನ ಇಬ್ಬರು ಮಕ್ಕಳು ಜಗಳ ಬಿಡಿಸಲು ಮುಂದಾದರೂ ಅವರನ್ನು ಪಕ್ಕಕ್ಕೆ ತಳ್ಳಿ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
50 ಸಾವಿರ ಹಫ್ತಾ ನೀಡಲು ಆರೋಪಿಗಳಿಂದ ಬೇಡಿಕೆ?
ವಕ್ಫ್ ಬೋರ್ಡ್ಗೆ ಸೇರಿದ ಜಾಗವಾಗಿದ್ದರಿಂದ ಗ್ಯಾರೆಜ್ ಮೇಲ್ಛಾವಣಿಗೆ ಮೋಲ್ಡ್ ಹಾಕಲು ವಕ್ಫ್ ಬೋರ್ಡ್ ಅನುಮತಿ ಬೇಕೆಂದು ಸ್ಥಳೀಯರು ಸೂಚಿಸಿದ್ದರು. ಬಳಿಕ ರಷಿದ್ ಪಾಷಾ, ಅನುಮತಿ ಕೂಡ ಪಡೆದುಕೊಂಡಿದ್ದ ಎಂದು ಹೇಳಲಾಗಿದೆ. ಆದರೂ ಕೆಲವರು ತಮಗೆ 50 ಸಾವಿರ ರೂ. ಹಫ್ತಾ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅದಕ್ಕೆ ರಷಿದ್ ಪಾಷಾ ನಿರಾಕರಿಸಿದ್ದರಿಂದ ಉದ್ದೇಶಪೂರ್ವಕವಾಗಿಯೇ ಗಲಾಟೆ ಮಾಡಿ ಹಲ್ಲೆ ನಡೆಸಿ ಹತ್ಯೆಗೈಯಲಾಗಿದೆ ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.



