Flash News

ದಾವಣಗೆರೆ ಫೈಟ್: SDPI ಅಭ್ಯರ್ಥಿ ಪರ ಪ್ರಚಾರ ನಡೆಸಲು ಓವೈಸಿ ಅಖಾಡಕ್ಕೆ!

ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಉಪಚುನಾವಣೆ ದಿನದಿಂದ ದಿನಕ್ಕೆ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಎಸ್‌ಡಿಪಿಐ (SDPI) ಅಭ್ಯರ್ಥಿ ಪರ ಪ್ರಚಾರ ನಡೆಸಲು ಎಐಎಂಐಎಂ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಆಗಮಿಸುವ ಸಾಧ್ಯತೆ ದಟ್ಟವಾಗಿದ್ದು, ಇದು ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದೆ.

ಎಸ್‌ಡಿಪಿಐನಿಂದ ಕಣಕ್ಕಿಳಿದಿರುವ ಅಪ್ಸರ್ ಕೂಡ್ಲಿಪೇಟೆ ಅವರ ಪರವಾಗಿ ಅಸಾದುದ್ದೀನ್ ಓವೈಸಿ ಪ್ರಚಾರಕ್ಕೆ ಬಂದರೆ ಮುಸ್ಲಿಂ ಮತಗಳು ದೊಡ್ಡ ಮಟ್ಟದಲ್ಲಿ ವಿಭಜನೆಯಾಗುವ ಆತಂಕ ಕಾಂಗ್ರೆಸ್ ಪಾಳಯದಲ್ಲಿದೆ. ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬೆನ್ನಿಗೆ ನಿಲ್ಲುತ್ತಿದ್ದ ಅಲ್ಪಸಂಖ್ಯಾತ ಮತಗಳು ಚದುರಿ ಹೋದರೆ, ಅದು ನೇರವಾಗಿ ಬಿಜೆಪಿಗೆ ವರದಾನವಾಗಲಿದೆ ಎಂಬ ಲೆಕ್ಕಾಚಾರಗಳು ಶುರುವಾಗಿವೆ.

ಒಂದೆಡೆ ಎಸ್‌ಡಿಪಿಐ ಸವಾಲಾಗಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸಾದಿಕ್ ಪೈಲ್ವಾನ್ ಅವರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದು ‘ಕೈ’ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮನೆಯೊಳಗಿನ ಬಂಡಾಯ ಮತ್ತು ಹೊರಗಿನ ಎಸ್‌ಡಿಪಿಐ ಅಬ್ಬರ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಹಾದಿಗೆ ಮುಳ್ಳಾಗುವ ಸಾಧ್ಯತೆ ಇದೆ.

ಮುಸ್ಲಿಂ ಮತಗಳ ವಿಭಜನೆಯನ್ನು ತಡೆಯಲು ಅಲರ್ಟ್ ಆಗಿರುವ ಕಾಂಗ್ರೆಸ್ ನಾಯಕರು, ಅಖಾಡದಲ್ಲಿರುವ ಮುಸ್ಲಿಂ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸಲು ಅಂತಿಮ ಪ್ರಯತ್ನ ನಡೆಸುತ್ತಿದ್ದಾರೆ. ಸಾದಿಕ್ ಪೈಲ್ವಾನ್ ಮತ್ತು ಎಸ್‌ಡಿಪಿಐ ಅಭ್ಯರ್ಥಿಯನ್ನು ಮನವೊಲಿಸಲು ಕಾಂಗ್ರೆಸ್ ನಾಯಕರು ಸಮುದಾಯದ ಪ್ರಭಾವಿ ಮುಖಂಡರು ಹಾಗೂ ಧರ್ಮಗುರುಗಳ ಸಹಾಯ ಕೋರಿದ್ದಾರೆ. ಯಾವುದೇ ಕಾರಣಕ್ಕೂ ಮುಸ್ಲಿಂ ಮತಗಳು ಹಂಚಿಹೋಗದಂತೆ ನೋಡಿಕೊಳ್ಳಲು ತೆರೆಮರೆಯ ಕಸರತ್ತುಗಳು ಜೋರಾಗಿವೆ.

ದಾವಣಗೆರೆ ದಕ್ಷಿಣ ಕ್ಷೇತ್ರವು ಅಲ್ಪಸಂಖ್ಯಾತ ಮತದಾರರನ್ನು ಗಣನೀಯ ಸಂಖ್ಯೆಯಲ್ಲಿ ಹೊಂದಿದೆ. ಇಲ್ಲಿ ಸುಮಾರು ಶೇ. 35 ರಿಂದ 40 ರಷ್ಟು ಮುಸ್ಲಿಂ ಮತದಾರರಿದ್ದಾರೆ. ಸಾಂಪ್ರದಾಯಿಕವಾಗಿ ಇವರು ಕಾಂಗ್ರೆಸ್‌ನ ‘ವೋಟ್ ಬ್ಯಾಂಕ್’ ಆಗಿದ್ದರು. ಈಗ ಎಸ್‌ಡಿಪಿಐ (SDPI) ಮತ್ತು ಓವೈಸಿ ಅವರ ಎಐಎಂಐಎಂ (AIMIM) ಮೈತ್ರಿ ಮಾಡಿಕೊಂಡರೆ, ಯುವ ಮುಸ್ಲಿಂ ಮತದಾರರು ಕಾಂಗ್ರೆಸ್‌ನ ಮೃದು ಧೋರಣೆಯನ್ನು ವಿರೋಧಿಸಿ ಈ ಹೊಸ ಪರ್ಯಾಯದತ್ತ ವಾಲುವ ಸಾಧ್ಯತೆ ಇದೆ. ಕಾಂಗ್ರೆಸ್ ಮತ್ತು ಎಸ್‌ಡಿಪಿಐ ನಡುವೆ ಮುಸ್ಲಿಂ ಮತಗಳು ವಿಭಜನೆಯಾದಷ್ಟೂ ಬಿಜೆಪಿಗೆ ಗೆಲುವಿನ ಹಾದಿ ಸುಗಮವಾಗುತ್ತದೆ.