Flash News

ಮಂಗಳೂರು | ಮಸೀದಿ ಕಾಣಿಕೆ ಡಬ್ಬಿ ಕಳವು ಯತ್ನ: ಆರೋಪಿಯ ಬಂಧನ

ಸುಳ್ಯ: ಮಸೀದಿಯ ಹರಕೆ ಡಬ್ಬಿಯಿಂದ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಎಲಿಮಲೆಯಲ್ಲಿ ಸಂಭವಿಸಿದೆ.


ಬಂಧಿತನನ್ನು ಆಂಧ್ರ ಪ್ರದೇಶ ಮೂಲದ ಮಹಮ್ಮದ್ ಹಾದಿಭಾಷ ಎಂದು ಗುರುತಿಸಲಾಗಿದೆ.

ಎ. 6ರಂದು ಬೆಳಗ್ಗೆ ಎಲಿಮಲೆ ಮಸೀದಿಯ ಹೊರಭಾಗದಲ್ಲಿ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಮಸೀದಿಯ ಗುರು ಹೊರಬಂದು ನೋಡಿದಾಗ ವ್ಯಕ್ತಿಯೊಬ್ಬ ಡಬ್ಬಿಯನ್ನು ಒಡೆಯುತ್ತಿರುವುದು ಕಂಡುಬಂದಿತು. ಆತನನ್ನು ಹಿಡಿಯಲು ಯತ್ನಿಸಿದರೂ ಆತ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ.

ಎಲಿಮಲೆ ಪೇಟೆಯ ಅಡಿಕೆ ವ್ಯಾಪಾರಿ ಹ್ಯಾರಿಸ್ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದಾಗ ಅವರು ಕಾರಿನಲ್ಲಿ ಹಿಂಬಾಲಿಸಿ ಮಸೀದಿಯಿಂದ ಸ್ವಲ್ಪ ದೂರದಲ್ಲೇ ಆರೋಪಿಯನ್ನು ಹಿಡಿದಿದ್ದಾರೆ. ಸ್ಥಳೀಯರ ಸಹಾಯದಿಂದ ಆತನನ್ನು ಮಸೀದಿಗೆ ಕರೆ ತಂದು ಸುಳ್ಯ ಪೊಲೀಸರಿಗೆ ಒಪ್ಪಿಸಿದರು.

ಕಳೆದ ಕೆಲವು ದಿನಗಳಿಂದ ಸುಳ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಕಾಣಿಕೆ ಹುಂಡಿಗಳನ್ನು ಮುರಿದು ಹಣ ದೋಚುವ ಪ್ರಕರಣಗಳು ವರದಿಯಾಗುತ್ತಿದ್ದು, ಇತ್ತೀಚೆಗೆ ಗೂನಡ್ಕದ ಬದ್ರಿಯಾ ಮಸೀದಿಯಲ್ಲೂ ಕಳ್ಳತನ ನಡೆಸಿ ಪರಾರಿಯಾಗಿದ್ದ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಪ್ರಾಥಮಿಕ ತನಿಖೆಯ ಪ್ರಕಾರ, ಜನಸಂದಣಿ ಕಡಿಮೆ ಇರುವ ಸಮಯವನ್ನು ಗುರಿಯಾಗಿಸಿಕೊಂಡು ಮಸೀದಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ನಡೆಸುತ್ತಿದ್ದನು ಎಂದು ತಿಳಿದು ಬಂದಿದೆ.

ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.