Flash News

ಗೂಡಿನಬಳಿ ಯುವಕನ ಅನುಮಾನಾಸ್ಪದ ಸಾವು: ನಿಷ್ಪಕ್ಷಪಾತ ತನಿಖೆಗೆ ಇಬ್ರಾಹಿಂ ನವಾಝ್ ಆಗ್ರಹ

ಬಂಟ್ವಾಳ: ತಾಲೂಕಿನ ಬಿ. ಮೂಡ ಗ್ರಾಮದ ಗೂಡಿನಬಳಿ ಕಂಚಿಕಾರಪೇಟೆ ಸಮೀಪದ ನೇತ್ರಾವತಿ ನದಿಯ ಹೊಸ ಸೇತುವೆಯಡಿಯಲ್ಲಿ ಸ್ಥಳೀಯ ಯುವಕ ಇರ್ಫಾನ್ (37) ಅವರ ಮೃತದೇಹ ಪತ್ತೆಯಾಗಿರುವ ಘಟನೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಹಾಗೂ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಪೊಲೀಸ್ ಇಲಾಖೆ ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಆಗ್ರಹಿಸಿದ್ದಾರೆ.

​ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗೂಡಿನಬಳಿ ನಿವಾಸಿಯಾದ ಇರ್ಫಾನ್ ಅವರ ಮೃತದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಶಂಕೆಗಳನ್ನು ಮೂಡಿಸಿದೆ. ಆದ್ದರಿಂದ ಪೊಲೀಸ್ ಅಧಿಕಾರಿಗಳು ಇದನ್ನು ಕೇವಲ ಸಾಮಾನ್ಯ ಘಟನೆಯೆಂದು ಪರಿಗಣಿಸಬಾರದು. ಪ್ರಕರಣದ ಎಲ್ಲಾ ಆಯಾಮಗಳಲ್ಲೂ ಸೂಕ್ಷ್ಮ ತನಿಖೆ ನಡೆಸಿ, ಸಾವಿನ ಹಿಂದಿನ ನಿಜವಾದ ಕಾರಣವನ್ನು ಶೀಘ್ರದಲ್ಲೇ ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

​ ನಾಗರಿಕರ ಜೀವ ಭದ್ರತೆಯನ್ನು ಕಾಪಾಡುವುದು ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಕರಣದ ತನಿಖೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸದೆ, ಒಂದು ವೇಳೆ ಇದರಲ್ಲಿ ಯಾರದೇ ಪಾತ್ರವಿದ್ದರೂ ಅವರನ್ನು ಕಾನೂನಿನ ಮುಂದೆ ತಂದು ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಮನವಿ ಮಾಡಿದರು.

​ಇದೇ ವೇಳೆ, ಇರ್ಫಾನ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಇಬ್ರಾಹಿಂ ನವಾಝ್, “ಯುವಕನ ಅಗಲಿಕೆ ಅವರ ಕುಟುಂಬ ಹಾಗೂ ಆತ್ಮೀಯರಿಗೆ ತುಂಬಲಾರದ ನಷ್ಟವಾಗಿದೆ. ಸೃಷ್ಟಿಕರ್ತನು ಮೃತರ ದುಃಖಿತ ಕುಟುಂಬಕ್ಕೆ ಈ ಆಘಾತವನ್ನು ಭರಿಸುವ ಶಕ್ತಿಯನ್ನು ನೀಡಲಿ” ಎಂದು ಪ್ರಾರ್ಥಿಸಿದ್ದಾರೆ.