ಬೆಂಗಳೂರು: ಚಲನಚಿತ್ರ ನಟಿ ಕ್ರಿಷಿ ತಾಪಂಡ ಅವರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸದಲ್ಲಿ ಆಪ್ತ ಗೆಳೆಯ ವೈಶಾಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ಗುರುವಾರ ಬೆಳಗ್ಗೆ(ಜೂ25) ಬೆಳಕಿಗೆ ಬಂದಿದೆ.
ವೈಶಾಕ್ ಈ ಹಿಂದೆ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದರು. ಸಾವಿನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು ಹಲವು ಅನುಮಾನಗಳು ವ್ಯಕ್ತವಾಗಿದೆ.
ಪ್ರತಿಷ್ಠಿತ ಅಪಾರ್ಟ್‌ಮೆಂಟ್ ನಲ್ಲೇ ನೇಣಿಗೆ ಶರಣಾಗಿದ್ದು ಬುಧವಾರ ನಿನ್ನೆ ರಾತ್ರಿ ಫ್ಲಾಟ್‌ಗೆ ಬಂದಿದ್ದ ವೈಶಾಕ್, ಯಾರೂ ಇಲ್ಲದ ಸಮಯವನ್ನು ನೋಡಿ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಕ್ರಿಷಿ ತಾಪಂಡ ಅವರೂ ಮನೆಯಲ್ಲಿ ಇರಲಿಲ್ಲ ಎಂದು ಹೇಳಲಾಗಿದೆ. ಸ್ಥಳಕ್ಕೆ ಧಾವಿಸಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವೈಶಾಕ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಫೆಬ್ರವರಿಯಲ್ಲಿ ವೈಶಾಕ್ ನನ್ನ ಕ್ರಿಷಿ ತಾಪಂಡ ಮನೆಯಲ್ಲೇ ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದರು.
ಜನವರಿಯಲ್ಲಿ ಉದ್ಯಮಿ ಅರವಿಂದ ರೆಡ್ಡಿಗೆ ಬ್ಲೂ ಡಾರ್ಟ್ ಕೊರಿಯರ್ ಮುಖಾಂತರ ಆರೋಪಿ ವೈಶಾಕ್ ಬೆದರಿಕೆ ಪತ್ರ ಕಳುಹಿಸಿದ್ದ. ವಿಳಾಸ ಹಾಗೂ ಸಹಿ ಇಲ್ಲದ ಅನಾಮಧೇಯ ಬೆದರಿಕೆ ಪತ್ರ ಅದಾಗಿತ್ತು. ಈ ಪತ್ರದಲ್ಲಿ, ಪ್ರಸ್ತುತ ನಿನ್ನ ಮತ್ತು ಮಹಿಳೆಯೊಂದಿಗಿರುವ (ಪರೋಕ್ಷವಾಗಿ ನಟಿ) ಜಗಳ ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ ನನ್ನ ಗ್ಯಾರೇಜ್‌ಗೆ 6 ರಿಂದ 7 ಕೋಟಿ ರೂ. ಕಳುಹಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಈ ಕುರಿತು ಅರವಿಂದ ರೆಡ್ಡಿ ಪೊಲೀಸರಿಗೆ ದೂರು ನೀಡಿದ್ದರು.



