Flash News

“ಎಂಚಾ ಉಲ್ಲಾರ್?”: ಮಂಗಳೂರಿನಲ್ಲಿ ನಟ ಶಾರುಖ್ ಖಾನ್​: ಬಾಲ್ಯದ ಫೋಟೋ ಪ್ರದರ್ಶನ

ಮಂಗಳೂರು: “ಎಂಚಾ ಉಲ್ಲಾರ್?” (ಹೇಗಿದ್ದೀರಿ?) ಎಂದು ತುಳುವಿನಲ್ಲೇ ಮಾತು ಆರಂಭಿಸಿ ಸಾವಿರಾರು ಅಭಿಮಾನಿಗಳ ಮನ ಗೆದ್ದ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್, ಮಂಗಳೂರಿನೊಂದಿಗೆ ತಮ್ಮ ಬಾಲ್ಯದ ಬಾಂಧವ್ಯವನ್ನು ಭಾವುಕರಾಗಿ ನೆನಪಿಸಿಕೊಂಡರು. ತಾವು ಕೇವಲ ಎರಡು ವರ್ಷದ ಆಸುಪಾಸಿನಲ್ಲಿದ್ದಾಗ ಮಂಗಳೂರಿನಲ್ಲಿ ತೆಗೆದಿದ್ದ ಬಾಲ್ಯದ ಅಪರೂಪದ ಫೋಟೋವನ್ನು ವೇದಿಕೆಯಲ್ಲಿ ಪ್ರದರ್ಶಿಸಿದ ಅವರು, “ನನ್ನ ಬಳಿ ಇರುವ ಬಾಲ್ಯದ ಏಕೈಕ ಫೋಟೋಗಳು ಮಂಗಳೂರಿನಲ್ಲಿ ತೆಗೆದವು. ಆದ್ದರಿಂದ ಈ ನಗರ ನನಗೆ ತುಂಬಾ ವಿಶೇಷ ಎಂದು ಹೇಳಿದರು.

ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಂಗಳೂರು ತಲುಪಿದ ಕ್ಷಣದಿಂದ ಕಾರ್ಯಕ್ರಮದ ವೇದಿಕೆಯವರೆಗೆ ಜನರು ನೀಡಿದ ಆತ್ಮೀಯ ಸ್ವಾಗತವನ್ನು ಮರೆಯಲಾಗದು ಎಂದು ಹೇಳಿದರು.

ವಿಮಾನ ನಿಲ್ದಾಣದಿಂದ ಇಲ್ಲಿಯವರೆಗೆ ಜನರು ತೋರಿಸಿದ ಪ್ರೀತಿ, ಆತ್ಮೀಯತೆ ಮತ್ತು ಉತ್ಸಾಹ ನನ್ನ ಮನಸ್ಸನ್ನು ಸ್ಪರ್ಶಿಸಿದೆ. ನಾನು ಮಂಗಳೂರಿಗೆ ಬಂದಿರುವುದಕ್ಕೆ ತುಂಬಾ ಸಂತೋಷವಾಗಿದ್ದು, ಇಂತಹ ಅದ್ಭುತ ಸ್ವಾಗತ ನೀಡಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದರು.

ರೋಹನ್ ಕಾರ್ಪೊರೇಶನ್ ಸಂಸ್ಥಾಪಕ ಡಾ. ರೋಹನ್ ಮೊಂತೇರೊ, ನಿರ್ದೇಶಕ ಡಿಯಾನ್ ಮೊಂತೇರೊ ಹಾಗೂ ಸಂಸ್ಥೆಯ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.

ಮಂಗಳೂರಿನೊಂದಿಗೆ ಬಾಲ್ಯದ ನಂಟು: ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ಶಾರುಖ್ ಖಾನ್, ನಾನು ತುಂಬಾ ಚಿಕ್ಕವನಿದ್ದ ಕಾರಣ ಇಲ್ಲಿನ ನೆನಪುಗಳು ಸ್ಪಷ್ಟವಾಗಿ ಇಲ್ಲ. ನನ್ನ ತಾತ ಆಗಿನ ಮಂಗಳೂರು ಬಂದರು ನಿರ್ಮಾಣ ಕಾರ್ಯಕ್ಕೆ ಮುಖ್ಯ ಎಂಜಿನಿಯರ್ ಆಗಿದ್ದರು. ಆ ಕಾರಣದಿಂದ ನಮ್ಮ ಕುಟುಂಬ ಕೆಲ ವರ್ಷಗಳ ಕಾಲ ಮಂಗಳೂರಿನಲ್ಲಿ ವಾಸಿಸಿತ್ತು ಎಂದು ಹೇಳಿದರು.

ಆ ಕಾಲದಲ್ಲಿ ಈಗಿನಂತೆ ಸುಲಭವಾಗಿ ಫೋಟೋ ತೆಗೆಯುವ ವ್ಯವಸ್ಥೆ ಇರಲಿಲ್ಲ. ಹಲವು ವರ್ಷಗಳ ನಂತರ ನನ್ನ ಬಾಲ್ಯದ ಫೋಟೋಗಳನ್ನು ಹುಡುಕಿದಾಗ ಸಿಕ್ಕಿದ್ದು ಮಂಗಳೂರಿನಲ್ಲಿ ತೆಗೆದ ಚಿತ್ರಗಳಷ್ಟೇ. ಆದ್ದರಿಂದ ಮಂಗಳೂರು ನನ್ನ ಬದುಕಿನಲ್ಲಿ ವಿಶೇಷ ಸ್ಥಾನ ಹೊಂದಿದೆ ಎಂದು ಭಾವುಕರಾದರು.

ಮತ್ತೆ ಮತ್ತೆ ಮಂಗಳೂರಿಗೆ ಬರಲು ಆಸೆ: ರೋಹನ್ ಮೊಂತೇರೊ ತಮ್ಮನ್ನು ಮಂಗಳೂರಿನ ಬಗ್ಗೆ ಪರಿಚಯಿಸಿದ್ದನ್ನು ನೆನಪಿಸಿಕೊಂಡ ಶಾರುಖ್ ಖಾನ್, ಈ ಬಾರಿ ಹಳೆಯ ನೆನಪುಗಳು ಹೆಚ್ಚು ಇಲ್ಲದಿದ್ದರೂ, ಮುಂದಿನ ದಿನಗಳಲ್ಲಿ ಮತ್ತೆ ಮತ್ತೆ ಮಂಗಳೂರಿಗೆ ಬಂದು ಹೊಸ ನೆನಪುಗಳನ್ನು ಕಟ್ಟಿಕೊಳ್ಳಲು ಬಯಸುತ್ತೇನೆ ಎಂದರು.

ಮಂಗಳೂರಿನ ಸಂಸ್ಕೃತಿ, ಭಾಷೆ ಹಾಗೂ ಜನರ ಆತಿಥ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿದ ಅವರು, ಮುಂದೆ ಹೆಚ್ಚು ಸಮಯ ತೆಗೆದುಕೊಂಡು ಇಲ್ಲಿ ಬಂದು ನಿಮ್ಮ ಸಂಸ್ಕೃತಿಯನ್ನು ಇನ್ನಷ್ಟು ತಿಳಿದುಕೊಳ್ಳುತ್ತೇನೆ. ನಿಮ್ಮ ಭಾಷೆ ನನಗೆ ತುಂಬಾ ಇಷ್ಟವಾಯಿತು. ಮುಂಬೈನಲ್ಲಿಯೂ ಮಂಗಳೂರಿನ ಅನೇಕ ಜನರಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ಅವರು, ನನ್ನ ಮಗಳಿಗೆ ಕಳುಹಿಸಲು ಮಂಗಳೂರಿನ ವಿಡಿಯೊಗಳನ್ನು ತೆಗೆದುಕೊಂಡಿದ್ದೇನೆ. ರೋಹನ್ ಅವರು ಸಮುದ್ರಕ್ಕೆ ಮುಖಮಾಡಿದ ಮನೆಗೆ ಬರಬೇಕು ಎಂದು ಆಹ್ವಾನಿಸಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಮಂಗಳೂರಿಗೆ ಆಗಾಗ ಬರುತ್ತೇನೆ. ಇಲ್ಲಿನ ರುಚಿಕರವಾದ ನೀರ್ ದೋಸೆ ಸವಿಯುತ್ತೇನೆ ಎಂದು ಹೇಳುತ್ತಿದ್ದಂತೆ ಸಭಾಂಗಣದಲ್ಲಿ ಕರತಾಡನ ಮೊಳಗಿತು.