ಬೆಂಗಳೂರು: ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆ ವಿಚಾರ ಇದೀಗ ಮತ್ತೊಂದು ಹಂತದ ರಾಜಕೀಯ ಸಂಘರ್ಷಕ್ಕೆ ತಿರುಗಿದೆ. ಮಸೀದಿ ಮುಂದೆ ಗಣೇಶನ ಮೂರ್ತಿ ಮೆರವಣಿಗೆ ನಡೆಸಬಾರದು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ನೀಡಿದ್ದ ಸೂಚನೆಗೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಇನ್ಸ್‌ಪೆಕ್ಟರ್ ವಿರುದ್ಧ ಕಿಡಿಕಾರಿದ್ದರು.
ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಇಮ್ರಾನ್ ಪಾಷಾ, ಪ್ರತಾಪ್ ಸಿಂಹ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಇಮ್ರಾನ್ ಪಾಷಾ, “ಲೇ ಸಿಂಹ..ಮುಸ್ಲಿಮರ ಬಗ್ಗೆ ಮಾತನಾಡುವುದನ್ನು ಮುಂದುವರಿಸಿದರೆ ಹುಷಾರ್. ಇದೇ ರೀತಿ ಮಾತನಾಡುತ್ತಾ ಹೋದರೆ ಮೊಟ್ಟೆ, ಚಪ್ಪಲಿ ಏಟು ತಿನ್ನಬೇಕಾಗುತ್ತದೆ” ಎಂದು ಇಮ್ರಾನ್ ಪಾಷಾ ಎಚ್ಚರಿಕೆ ನೀಡಿದ್ದಾರೆ.
ಇಷ್ಟಕ್ಕೇ ನಿಲ್ಲದ ಇಮ್ರಾನ್ ಪಾಷಾ, “ನಿನ್ನಂತ ನಾಲಾಯಕ್, ಥರ್ಡ್ ಕ್ಲಾಸ್ ವ್ಯಕ್ತಿ ಕರ್ನಾಟಕದಲ್ಲಿ ಎಲ್ಲೂ ಇಲ್ಲ. ಹಿಂದೂ-ಮುಸ್ಲಿಂ ಬಾಂಧವರ ನಡುವೆ ವೈಷಮ್ಯ ಹುಟ್ಟುಹಾಕುವ ಕೆಲಸ ಮಾಡಿದರೆ ಚಪ್ಪಲಿ ಏಟು, ಮೊಟ್ಟೆ ಏಟು ಖಚಿತ” ಎಂದು ಹೇಳಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, “ನಿನ್ನಂತಹ ಒಂದು ಲಕ್ಷ ಜನ ನಮ್ಮ ಎದುರಿಗೆ ಬಂದರೂ, ನಮ್ಮ ಸಮುದಾಯದ ಒಂದು ಕೂದಲನ್ನೂ ಕಿತ್ತುಕೊಳ್ಳಲು ನಿನ್ನಿಂದ ಆಗಲ್ಲ” ಎಂದು ಸವಾಲಿನ ಧಾಟಿಯಲ್ಲಿ ಮಾತನಾಡಿದ್ದಾರೆ.
“ನಮ್ಮ ಮುಸ್ಲಿಂ ಹೆಣ್ಮಕ್ಕಳೇ ನಿನ್ನನ್ನು ಹೊಡೆದು ಸ್ಮಶಾನದೊಳಗೆ ಹಾಕುತ್ತಾರೆ. ನಿನ್ನಂತಹ ಸಾವಿರ ಜನ ಬಂದರೂ ನಮ್ಮ ಸಮುದಾಯದ ಒಂದು ಕೂದಲನ್ನೂ ಕಿತ್ತುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗಣೇಶ ಮೆರವಣಿಗೆಗೆ ಸಂಬಂಧಿಸಿದ ಪೊಲೀಸ್ ಸೂಚನೆ…ಪ್ರತಾಪ್ ಸಿಂಹರ ಆಕ್ರೋಶ…
ಇದೀಗ ಜಮೀರ್ ಆಪ್ತ ಇಮ್ರಾನ್ ಪಾಷಾ ಅವರ ತೀವ್ರ ಹೇಳಿಕೆ…ಹೀಗೆ ಗಣೇಶೋತ್ಸವದ ವಿಚಾರ ನಿಧಾನವಾಗಿ ರಾಜಕೀಯ ಸಂಘರ್ಷವಾಗಿ ಮಾರ್ಪಡುತ್ತಿದ್ದು, ಪರ-ವಿರೋಧದ ಹೇಳಿಕೆಗಳು ಮತ್ತಷ್ಟು ಕಾವು ಪಡೆದುಕೊಳ್ಳುತ್ತಿವೆ.



