ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ವನ್ನು ನಿಷೇಧಿಸುವ ವಿಪಕ್ಷಗಳ ಒತ್ತಾಯ ಹೆಚ್ಚಾಗುತ್ತಿದೆ. ಇದು ರಾಜಕೀಯ ಸ್ವರೂಪವನ್ನೂ ಪಡೆದಿದೆ. ಇದರ ಮಧ್ಯೆ ಆರ್‌ಎಸ್‌ಎಸ್ (RSS) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಇಂದು ಈ ಬಗ್ಗೆ ಮೊದಲ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಆರ್‌ಎಸ್‌ಎಸ್ ಅನ್ನು ಕಾನೂನುಬಾಹಿರಗೊಳಿಸುವ ಪ್ರಯತ್ನಗಳು ಹೊಸದಲ್ಲ, ಈ ಹಿಂದೆ ಪದೇ ಪದೇ ಈ ಪ್ರಯತ್ನ ವಿಫಲವಾಗಿದೆ ಎಂದಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಕೂಡ ಆರ್‌ಎಸ್‌ಎಸ್ ಮೇಲೆ ನಿಷೇಧ ಹೇರಬೇಕೆಂದು ಪತ್ರವೊಂದನ್ನು ಬರೆದಿದ್ದರು ಎಂದಿದ್ದರು. ಆರ್‌ಎಸ್‌ಎಸ್ ನಿಷೇಧದ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿರುವ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, “ಆರ್‌ಎಸ್‌ಎಸ್ ಈ ಹಿಂದೆ ಒಮ್ಮೆ ಅಲ್ಲ, ಮೂರು ಬಾರಿ ಕಾಂಗ್ರೆಸ್ ಸರ್ಕಾರಗಳ ಅಡಿಯಲ್ಲಿ ನಿಷೇಧದ ಪ್ರಯತ್ನಗಳನ್ನು ಎದುರಿಸಿದೆ. ಆದರೆ ಪ್ರತಿ ಬಾರಿಯೂ ಸಾರ್ವಜನಿಕ ಬೆಂಬಲ ಮತ್ತು ನ್ಯಾಯಾಂಗ ಪರಿಶೀಲನೆಯ ಬಳಿಕ ಆ ಪ್ರಯತ್ನ ವಿಫಲವಾಗಿದೆ” ಎಂದಿದ್ದಾರೆ.
“ಆರ್‌ಎಸ್‌ಎಸ್ ಮೇಲೆ ನಿಷೇಧ ಏಕೆ? ಎಂಬ ಕಾರಣವನ್ನು ನೀಡಿ. ಅದು ಕೇವಲ ಒಬ್ಬರ ಆಶಯವಾಗಿರಬಹುದಲ್ಲವೇ? ನಿಜವಾದ ಕಾರಣವೇನು? ಆರ್‌ಎಸ್‌ಎಸ್ ರಾಷ್ಟ್ರ ನಿರ್ಮಾಣ ಮತ್ತು ಸಮಾಜವನ್ನು ಬಲಪಡಿಸುವ ಪ್ರಯತ್ನಗಳ ಮೂಲಕ ನಿರಂತರವಾಗಿ ಕೊಡುಗೆ ನೀಡಿದೆ” ಎಂದು ಹೊಸಬಾಳೆ ಹೇಳಿದ್ದಾರೆ.
ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಎಸ್‌ಎಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲೆ ನಿಷೇಧ ಹೇರಬೇಕೆಂದು ಒತ್ತಾಯಿಸಿದ ಒಂದು ದಿನದ ನಂತರ ದತ್ತಾತ್ರೇಯ ಹೊಸಬಾಳೆ ಅವರ ಈ ಹೇಳಿಕೆಗಳು ಬಂದಿವೆ. ಭಾರತದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಚೌಕಟ್ಟನ್ನು ರಕ್ಷಿಸಲು ಸರ್ದಾರ್ ವಲ್ಲಭಭಾಯಿ ಪಟೇಲ್ ಒಮ್ಮೆ ಇದೇ ರೀತಿಯ ನಿರ್ಬಂಧಗಳನ್ನು ವಿಧಿಸಿದ್ದರು ಎಂದು ಖರ್ಗೆ ಹೇಳಿದ್ದರು.



