ಬೆಳ್ತಂಗಡಿ: ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಗೆಳೆಯರೊಂದಿಗೆ ಬಂದಿದ್ದ ಅಪ್ರಾಪ್ತ ವಯಸ್ಸಿನ ಮುಸ್ಲಿಂ ಬಾಲಕನ ಮೇಲೆ ಬಜರಂಗ ದಳದ ಕಾರ್ಯಕರ್ತರೆನ್ನಲಾದ ತಂಡವೊಂದು ಅಮಾನುಷವಾಗಿ ಹಲ್ಲೆ ನಡೆಸಿ, ಅಪಹರಿಸಿ, ಬೆದರಿಕೆ ಹಾಕಿ ಆತ್ಮಹತ್ಯೆಗೆ ಪ್ರೇರೇಪಿಸಿದ ಬಗ್ಗೆ ಬಾಲಕನ ತಂದೆ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಜಿರೆಯ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿರುವ ಬಾಲಕ, ಮಾರ್ಚ್ 11ರಂದು ತನ್ನ ಸ್ನೇಹಿತರೊಂದಿಗೆ ಉಜಿರೆ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದಾನೆ. ರಾತ್ರಿ 8.30ರ ಸುಮಾರಿಗೆ ಜಾತ್ರೆಯಲ್ಲಿ ಆತನ ಸ್ನೇಹಿತರು ಜಾಯಿಂಟ್ ವ್ಹೀಲ್ ಮೇಲೆ ಹತ್ತಿದ ಸಂದರ್ಭದಲ್ಲಿ ಅವರ ಮೊಬೈಲ್ ಹಿಡಿದುಕೊಂಡು ಸಮೀಪದಲ್ಲಿ ನಿಂತಿದ್ದ ಬಾಲಕನನ್ನು ಉಜಿರೆಯ ಬಜರಂಗ ದಳದ ಕಾರ್ಯಕರ್ತರೆನ್ನಲಾದ ಗೌರವ್ ಶೆಟ್ಟಿ ಮತ್ತು ರಮೇಶ್ ಸೇರಿದಂತೆ ಇತರರು “ನೀನು ಮುಸ್ಲಿಮನಾ?” ಎಂದು ಪ್ರಶ್ನಿಸಿದ್ದಾರೆ. ಹೌದು ಎಂದಾಗ ಆತನ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತನ ಸ್ನೇಹಿತರು ಬಿಡಿಸಲು ಬಂದರೂ ಅವರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ.
ಜಾತ್ರೆಯ ನಡುವೆ ಜನಸಂದಣಿ ಹೆಚ್ಚಾದಾಗ ಬಾಲಕನನ್ನು ಅಲ್ಲಿಂದ ಬೈಕ್ನಲ್ಲಿ ಅಪಹರಿಸಿ ಸುಮಾರು ಐದು ಕಿ.ಮೀ ದೂರಕ್ಕೆ ಕೊಂಡೊಯ್ದು, ನಿರ್ಜನ ಪ್ರದೇಶದಲ್ಲಿ ಹತ್ತಕ್ಕೂ ಹೆಚ್ಚು ಮಂದಿಯ ತಂಡ ನಿರಂತರವಾಗಿ ಹಲ್ಲೆ ನಡೆಸಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. “ನೀವು ಬ್ಯಾರಿಗಳು ಟೆರರಿಸ್ಟ್ಗಳು, ನಿಮ್ಮನ್ನು ಕೊಂದರೆ ಒಬ್ಬ ಟೆರರಿಸ್ಟ್ನ್ನು ಕೊಂದ ಹಾಗೆ” ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಆತನಿಗೆ ಬೆದರಿಕೆ ಹಾಕಿ ವಿಡಿಯೋ ಕೂಡ ಮಾಡಿಕೊಂಡಿದ್ದಾರೆ. ನಿರಂತರ ಹಲ್ಲೆ ನಡೆಸಿದ ಬಳಿಕ ತಡರಾತ್ರಿ ಬಾಲಕನನ್ನು ಉಜಿರೆಯ ಸಾಯಿರಾಂ ಕಟ್ಟಡದ ಬಳಿ ಬಿಟ್ಟು ಹೋಗಿದ್ದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಲ್ಲೆಗೆ ಒಳಗಾದ ಬಳಿಕ ಮನೆಗೆ ಬಂದು ಖಿನ್ನತೆಯಿಂದಿದ್ದ ಬಾಲಕ ಘಟನೆ ಕುರಿತು ಮನೆಯವರಿಗೆ ಹೇಳಿರಲಿಲ್ಲ. ಆರೋಪಿಗಳು ಪ್ರತಿದಿನ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದರು. ಬಾಲಕ ಕರೆ ಸ್ವೀಕರಿಸದಿದ್ದಾಗ ಆತನ ಮೊಬೈಲ್ಗೆ ಗೌರವ್ ಶೆಟ್ಟಿ ಸಂದೇಶ ಕಳುಹಿಸಿ, “ಕರೆ ಸ್ವೀಕರಿಸದಿದ್ದರೆ ನಿನ್ನ ಮನೆಗೆ ಬರುತ್ತೇವೆ” ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದರಿಂದ ಖಿನ್ನತೆಗೆ ಒಳಗಾದ ಬಾಲಕ ಆತ್ಮಹತ್ಯೆ ಮಾಡಲು ನಿರ್ಧರಿಸಿ ಡೆತ್ ನೋಟ್ ಬರೆದಿದ್ದಾನೆ.
ಈ ಡೆತ್ ನೋಟ್ ಮನೆಯವರ ಗಮನಕ್ಕೆ ಆಕಸ್ಮಿಕವಾಗಿ ಬಂದಿದ್ದು, ಬಾಲಕನನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಬಾಲಕನ ತಂದೆ ಮಾರ್ಚ್ 18ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹಲ್ಲೆ, ಕೊಲೆ ಬೆದರಿಕೆ, ಗುಂಪು ಹಲ್ಲೆ, ಜೀವ ಬೆದರಿಕೆ, ಅಪಹರಣ ಹಾಗೂ ಆತ್ಮಹತ್ಯೆಗೆ ಪ್ರೇರಣೆ ಆರೋಪಗಳ ಮೇರೆಗೆ ಪೊಲೀಸರು BNS 137(2), 115(2), 351(2), 352, 353(2) ಹಾಗೂ 190 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.



