Flash News

ಮೃತ ಕಾಂಗ್ರೆಸ್ ಕಾರ್ಯಕರ್ತನ ಕುಟುಂಬಕ್ಕೆ 25 ಲಕ್ಷ ಪರಿಹಾರ ವಿತರಿಸಿದ ಸಚಿವ ಜಮೀರ್ ವಿರುದ್ಧ ITಗೆ ದೂರು

ಬೆಂಗಳೂರು: ಬ್ಯಾನರ್ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿಗೆ ಬಲಿಯಾಗಿದ್ದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಕುಟುಂಬಕ್ಕೆ ಪರಿಹಾರ ರೂಪದಲ್ಲಿ 25 ಲಕ್ಷ ರೂ. ನಗದು ವಿತರಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಕೆಯಾಗಿದೆ.

ಹಿಂದೂ ಮುಖಂಡ ತೇಜಸ್​​ಗೌಡ ಎಂಬುವರು ಜಮೀರ್ ಅಹಮದ್ ವಿರುದ್ಧ ಐಟಿ ಇಲಾಖೆಗೆ ದೂರು ನೀಡಿದ್ದಾರೆ. ಆರ್​ಬಿಐ ನಿಯಮದ ಪ್ರಕಾರ 2 ಲಕ್ಷಕ್ಕಿಂತ ಹೆಚ್ಚು ಹಣ ನಗದು ಇಟ್ಟುಕೊಳ್ಳುವುದು ಅಥವಾ ವಹಿವಾಟು ಮಾಡುವುದು ಕಾನೂನುಬಾಹಿರ. ಒಂದು ವೇಳೆ ಹಣ ಇಟ್ಟುಕೊಂಡಿದ್ದರೆ ಸೂಕ್ತ ದಾಖಲಾತಿ ಇರಬೇಕು. ಹೀಗಾಗಿ, ಈ ಹಣದ ಮೂಲದ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ತೇಜಸ್ ಗೌಡ, ‘ಬಳ್ಳಾರಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಅಮಾಯಕ ಕಾರ್ಯಕರ್ತನ ಸಾವಾಗಿತ್ತು. ಆ ಸಾವಿಗೆ ಪರಿಹಾರದ ರೂಪದಲ್ಲಿ ಸಚಿವರು 25 ಲಕ್ಷ ಹಾರ್ಡ್​ ಕ್ಯಾಶ್ ಕೊಟ್ಟಿದ್ದಾರೆ. ಅದು ಆರ್​ಬಿಐನ ಗೈಡ್​ಲೈನ್ಸ್​ನ ವೈಲೇಷನ್ ಆಗಿದೆ. 25 ಲಕ್ಷ ಅಲ್ಲ, ಆ ಕುಟುಂಬಕ್ಕೆ 25 ಕೋಟಿ ಹಣವನ್ನು ಕೊಟ್ಟರೂ ಕಡಿಮೆಯೇ. ಆದರೆ, ಅವರೊಬ್ಬ ಸರ್ಕಾರದ ಸಚಿವರಾಗಿ ಯಾವ ರೀತಿ ಹಣವನ್ನು ಕೊಡಬೇಕು ಎಂಬುದನ್ನು ಮರೆತು ಹಣವನ್ನು ಕೊಟ್ಟಿರುವುದು ಅನುಮಾನಾಸ್ಪದವಾಗಿದೆ. ಆ ಕ್ಯಾಶ್ ಅಕೌಂಟಬಲ್ ಆಗಿದೆಯಾ? ಅಥವಾ ಬ್ಲಾಕ್ ಮನಿಯೇ? ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಇನ್​ಕಮ್​ ಟ್ಯಾಕ್ಸ್​ ಡಿಪಾರ್ಟ್​ಮೆಂಟ್​ಗೆ ನಾನು ದೂರು ಕೊಟ್ಟಿದ್ದೇನೆ. 2 ಲಕ್ಷಕ್ಕಿಂತ ಹೆಚ್ಚು ಹಣ ನೀಡಬೇಕಾದರೆ ಬ್ಯಾಂಕಿಂಗ್ ಮೂಲಕವೇ ಅಂದರೆ, ಆರ್​ಟಿಜಿಎಸ್​, ನೆಫ್ಟ್​, ಇಲ್ಲ ಎಂದರೆ ಆನ್​ಲೈನ್ ಟ್ರಾನ್ಸಾಕ್ಷನ್​ ಮೂಲಕವೇ ಕೊಡಬೇಕು. ಆದ್ರೆ ಇವರು ಹೀಗೆ 25 ಲಕ್ಷ ಹಾರ್ಡ್​ ಕ್ಯಾಶ್ ಕೊಟ್ಟಿದ್ದಾರೆ ಎಂದರೆ, ಆ ಹಣದ ಮೂಲವೇನು?. ಯಾವ ರೀತಿ ಹಣವನ್ನು ಸಂಪಾದನೆ ಮಾಡಿದ್ದಾರೆ ಹಾಗೂ ಅದು ಅಕೌಂಟೆಬಲ್ ಆಗಿಲ್ಲದಿದ್ದರೆ ಸೆಕ್ಷನ್ 69 ಆ್ಯಕ್ಟ್​ನ ಕಂಪ್ಲೀಟ್ ವೈಲೇಷನ್ ಆಗಿದೆ. ಹಾಗಾಗಿ, ಅದರ ತನಿಖೆಯಾಗಬೇಕು ಎಂದು ದೂರು ಕೊಟ್ಟಿದ್ದೇನೆ’ ಎಂದಿದ್ದಾರೆ.

‘ಆ ಕುಟುಂಬಕ್ಕೆ ರಾಜಶೇಖರ್ ಎಂಬುವವರು ಒಬ್ಬರೇ ಆಧಾರಸ್ತಂಭವಾಗಿದ್ದರು. ಆ ಕುಟುಂಬಕ್ಕೆ ಸರ್ಕಾರಿ ನೌಕರಿಯನ್ನೂ ಕೊಡಲಿ. ನಮಗೆ ಅದರಿಂದ ಏನೂ ಬೇಜಾರಿಲ್ಲ. ಆ ಕುಟುಂಬಕ್ಕೆ ಏನೇ ಪರಿಹಾರ ಕೊಟ್ಟರೂ ಕಳೆದುಕೊಂಡಿರುವ ಮಗ ಮತ್ತೆ ಹುಟ್ಟಿ ಬರಲ್ಲ. ಆದರೆ, ಹಾರ್ಡ್​ ಕ್ಯಾಶ್ ಕೊಟ್ಟಿರುವುದು ಸರಿಯಾದ ಮಾರ್ಗವಲ್ಲ. ಅವರು ಸಚಿವರಾಗಿದ್ದಾರೆ. ಅವರು ಸಮಾಜಕ್ಕೆ ಏನು ಸಂದೇಶ ಕೊಡುತ್ತಾರೆ. ಬಡವರಿಗೊಂದು, ಸಾಹುಕಾರರಿಗೊಂದು ಎಂಬ ಕಾನೂನು ಇಲ್ಲ. ಇವರು ಆರ್​ಬಿಐ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ’ ಎಂದು ತಿಳಿಸಿದ್ದಾರೆ.