ಬೆಂಗಳೂರು : ರಾಜ್ಯದಲ್ಲಿ ಬೈ ಎಲೆಕ್ಷನ್ ಅಬ್ಬರ ಜೋರಾಗಿದೆ. 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಘಟಾನುಘಟಿಗಳೇ ಪ್ರಚಾರಕ್ಕೆ ಇಳಿದಿದ್ದು, ಗೆಲುವಿನ ಪಣ ತೊಟ್ಟಿದ್ದಾರೆ. ದಾವಣಗೆರೆಯಲ್ಲಿ ಕೈ ಅಭ್ಯರ್ಥಿ ಸಮರ್ಥ್ ಶಾಮನೂರಿಗೆ ಮುಸ್ಲಿಂ ನಾಯಕರ ಬಂಡಾಯದ ಬಿಸಿ ತಟ್ಟದಂತೆ ನೋಡಿಕೊಳ್ಳಲು ಕಾಂಗ್ರೆಸ್ ಮುಸ್ಲಿಂ ನಾಯಕರು ದಾವಣಗೆರೆಗೆ ದೌಡಾಯಿಸಿದ್ದಾರೆ. ಜಿಲ್ಲೆಯಲ್ಲಿ ಮುಸ್ಲಿಂ ಪಕ್ಷೇತರ ಅಭ್ಯರ್ಥಿಗಳ ಮನವೊಲಿಕೆ ಮಾಡಲು ಬಂದಿದ್ದ ನಲಪಾಡ್, ಮುಸ್ಲಿಂ ನಾಯಕರ ಕೆಂಗಣ್ಣಿಗೆ ಗುರಿಯಾಗುವಂತಹ ಹೇಳಿಕೆ ನೀಡಿದ್ರು. ಈ ವಿಚಾರಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಕೂಡ ಗರಂ ಆಗಿದ್ದು, ನಲಪಾಡ್ಗೆ ವಾರ್ನಿಂಗ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ.
ಗಡ್ಡ ಬಿಟ್ಟುಕೊಂಡು ಟೋಪಿ ಹಾಕಿಕೊಂಡವರೆಲ್ಲಾ ನಿಜವಾದ ಮುಸ್ಲಿಂರಲ್ಲ ಎಂಬ ಮೊಹಮದ್ ನಲಪಾಡ್ ಹೇಳಿಕೆಗೆ ದಾವಣಗೆರೆ ಮುಸ್ಲಿಂ ಮುಖಂಡರು ಆಕ್ರೋಶ ಹೊರಹಾಕಿದ್ರು. ಈ ಬಗ್ಗೆ ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಲಪಾಡ್ ವಿರುದ್ಧ ಸುರ್ಜೇವಾಲ ಹಾಗೂ ಸಿಎಂ ಸಿದ್ದರಾಮಯ್ಯಗೆ ಕೆಲ ಮೌಲ್ವಿಗಳು, ಮುಸ್ಲಿಂ ಮುಖಂಡರು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮುಸ್ಲಿಂ ಸಮುದಾಯದವರಾಗಿರೋ ನಲಪಾಡ್ ಮುಸ್ಲಿಂರ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ ನೀಡಿದ್ದು ಯಾಕೆ? ಇಮ್ರಾನ್ ಪಾಷ ಮೇಲೆ ವೈಯುಕ್ತಿಕ ದ್ವೇಷ ಇದ್ರೆ ಅವರ ವಿರುದ್ದ ಮಾತನಾಡಲಿ. ಆದರೆ ಗಡ್ಡ, ಟೋಪಿ ವಿಚಾರ ಯಾಕೆ ಮಾತನಾಡಬೇಕು ಎಂದು ಮುಸ್ಲಿಂ ಮುಖಂಡರು ಸುರ್ಜೇವಾಲಗೆ ದೂರು ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ನಲಪಾಡ್ ಮಾತಿಗೆ ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯ ಆಕ್ರೋಶಗೊಂಡಿದ್ದು, ಎಚ್ಚರಿಕೆಯಿಂದ ಇರಲು ಹೇಳಿ ಎಂದು ಕೆಲ ಮುಸ್ಲಿಂ ಮುಖಂಡರು ಹಾಗೂ ಮೌಲ್ವಿಗಳು ದೂರು ಕೊಟ್ಟ ಹಿನ್ನೆಲೆ ನಲಪಾಡ್ ಅವರನ್ನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ.
ನಲಪಾಡ್ಗೆ ದೂರವಾಣಿ ಕರೆ ಮಾಡಿ ಸುರ್ಜೇವಾಲ ವಾರ್ನಿಂಗ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಅಷ್ಟೇ ಅಲ್ಲದೇ ಚುನಾವಣೆ ವೇಳೆ ರಾಜ್ಯ ನಾಯಕರಿಗೂ ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ. ದಾವಣಗೆರೆಯಲ್ಲಿ ಪ್ರಚಾರದ ವೇಳೆಯೇ ಸಿಎಂ ಸಿದ್ದರಾಮಯ್ಯ ಹಾಗೂ ರಣದೀಪ್ ಸುರ್ಜೇವಾಲ ಇಬ್ಬರೂ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗ್ತಿದೆ. ಇದೀಗ ನಲಪಾಡ್ ದಾವಣಗೆರೆಯಿಂದ ಕೇರಳದತ್ತ ತೆರಳಿದ್ದಾರಂತೆ.



