Flash News

ಸುನ್ನತ್​​ ಆದರೂ ಮಾಡಿಕೋ, ಮಾಂಸನಾದ್ರೂ ತಿನ್ನು; ಸಿಎಂ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಐಹೊಳೆ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆ ಮಾಡಲಾಗಿದೆ.

ಈ ವೇಳೆ ಮಾತನಾಡಿದ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಸಿದ್ದರಾಮಯ್ಯ ಯುಗಾದಿ ಹಬ್ಬದಂದೂ ಮಾಂಸ ತಿಂತೀನಿ ಅಂತಾರೆ. ಸಿದ್ರಾಮಣ್ಣ ನೀನು ಮಾಂಸನಾದ್ರೂ ತಿನ್ನು, ಸುನ್ನತ್​​ ಆದರೂ ಮಾಡಿಕೋ, ಏನ್ಬೇಕಾದರೂ ಮಾಡು ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ನೀನು ಯುಗಾದಿ, ದೀಪಾವಳಿ ಹಬ್ಬಕ್ಕೆ ಮಾಂಸ ತಿಂತೀನಿ ಅಂದರೆ 15% ಮುಸ್ಲಿಮರನ್ನು ಓಲೈಸಲು ಹಿಂದೂಗಳ ಭಾವನೆಗೆ ಧಕ್ಕೆ ತಂದಂತೆ. 85% ಹಿಂದೂಗಳಿದ್ದರೂ ಹರಿದು ಹಂಚಿ ಹೋಗಿದ್ದಾರೆ. ಗೌಡ, ಲಿಂಗಾಯತ, ಕುರುಬ, ವಾಲ್ಮೀಕಿ, ದಲಿತರು ವಿಭಜನೆಯಾಗಿದೆ. ಹಿಂದೂಗಳು ಉಳಿಯಬೇಕು ಅಂದ್ರೆ ಒಗ್ಗಟ್ಟಾಗಬೇಕು ಎಂದು ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಖಾಸಗಿ ಚಾನಲ್ ಜೊತೆ ಮಾತನಾಡಿದ ಅವರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ. 40 ರಷ್ಟು ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಈಗಿನ ಸರ್ಕಾರದ ಲೂಟಿ ನೋಡಿದ ಬಳಿಕ ಸತ್ತೇ ಹೋಗಿಬಿಟ್ಟ ಮನುಷ್ಯ ಎಂದು ಪ್ರತಾಪಸಿಂಹ ಆರೋಪಿಸಿದ್ದಾರೆ.

ಸಿದ್ದರಾಮಯ್ಯ ಅವರ ಹೆಸರಷ್ಟೇ ಹಿಂದೂ, ಆದರೆ ಅವರ ಗುಣನಡತೆಗಳಲ್ಲಿ ಹಿಂದೂ ಧರ್ಮದ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದವರು ಹಿಂದುತ್ವ ಮಂತ್ರ ಜಪಿಸುತ್ತಿದ್ದಾರೆ. ನಾಗಮಂಗಲದಲ್ಲಿ ಗಣೇಶ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ ನಡೆದಾಗ ಸಣ್ಣಪುಟ್ಟ ಘಟನೆ ಎಂದು ಮುಖ್ಯಮಂತ್ರಿ ಅವರು ಹೇಳಿದ್ದರು. ಅಲ್ಲದೆ, ಸ್ಥಳಕ್ಕೆ ಭೇಟಿ ನೀಡಲಿಲ್ಲ.

ಮದ್ದೂರಿನಲ್ಲಿ ಮಸೀದಿ ಮೇಲೆ ಕಲ್ಲು ತೂರಾಟ, ಅಣ್ಣಮ್ಮ ಜಾತ್ರೆ ಮೇಲೆ ಕಲ್ಲು ತೂರಾಟ, ಶಿವಾಜಿ ಜಯಂತಿಯಂದು ಚಪ್ಪಲಿ ಮತ್ತು ಕಲ್ಲು ತೂರಾಟ ನಡೆದಾಗ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸದಸ್ಯರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನವರು ನಿಜವಾದ ಹಿಂದುಗಳಾಗಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದರು ಎಂದು ಅವರು ಹೇಳಿದರು.

ಎಲ್ಲಾ ಮುಖ್ಯಮಂತ್ರಿಗಳು ಮಾಡಿದ ಸಾಲಕ್ಕಿಂತ ಸಿದ್ದರಾಮಯ್ಯ ಅವರು ಮಾಡಿದ ಸಾಲವೇ ಜಾಸ್ತಿಯಾಗಿದೆ. ಸಿದ್ದರಾಮಯ್ಯ ಅವರು ಸಾಲರಾಮಯ್ಯ ಆಗಿದ್ದಾರೆ ಎಂದು ಅವರು ಟೀಕಿಸಿದರು. ಕಳೆದ ಮೂರು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ, ರಸ್ತೆ ಅಥವಾ ಕುಡಿಯುವ ನೀರಿನ ವ್ಯವಸ್ಥೆಯೂ ಸುಧಾರಿಸಿಲ್ಲ ಎಂದು ಪ್ರತಾಪಸಿಂಹ ಆರೋಪಿಸಿದರು.