Flash News

ಪತ್ರಕರ್ತೆ ನಿಧಿ ರಾಜ್ದಾನ್ ಜೊತೆ ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಎರಡನೇ ವಿವಾಹ!

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪ್ರಸಿದ್ಧ ಪತ್ರಕರ್ತೆ ನಿಧಿ ರಾಜ್ದಾನ್ ಅವರೊಂದಿಗೆ ವಿವಾಹ ಬಂಧನಕ್ಕೆ ಕಾಲಿಟ್ಟಿದ್ದಾರೆ. ಶನಿವಾರ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಂತಸದ ಸುದ್ದಿಯನ್ನು ಸ್ವತಃ ಓಮರ್ ಅಬ್ದುಲ್ಲಾ ಅವರೇ ಹಂಚಿಕೊಂಡಿದ್ದಾರೆ.

ತಮ್ಮ ಪತ್ನಿ ನಿಧಿ ರಾಜ್ದಾನ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿರುವ ಅವರು, “ನಿನ್ನೆ ನಮ್ಮ ಜೀವನದ ಹೊಸ ಪಯಣ ಆರಂಭವಾಗಿದೆ” ಎಂದು ಬರೆದುಕೊಂಡು ನಿಧಿ ಅವರನ್ನು ಟ್ಯಾಗ್ ಮಾಡಿದ್ದಾರೆ. ಮದುವೆಯಾದ ಮರುದಿನವೇ ಈ ಸಂತಸದ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ಮುಖ್ಯಮಂತ್ರಿ ತಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ.

ಒಮರ್ ಅಬ್ದುಲ್ಲಾ ಹಾಗೂ ಅವರ ಮೊದಲ ಪತ್ನಿ ಪಾಯಲ್ ಅಬ್ದುಲ್ಲಾ ಅವರ ವಿಚ್ಛೇದನ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೆರೆ ಎಳೆದ ಮೂರು ತಿಂಗಳ ನಂತರ ಈ ಮದುವೆ ನಡೆದಿದೆ. ಕಳೆದ ಜುಲೈ 31, 2026 ರಂದು ಸುಪ್ರೀಂ ಕೋರ್ಟ್ ಸಂವಿಧಾನದ 142 ನೇ ವಿಧಿಯಡಿಯಲ್ಲಿ ಇಬ್ಬರ ಪರಸ್ಪರ ಸಮ್ಮತಿಯ ಮೇರೆಗೆ ವಿಚ್ಛೇದನ ಮಂಜೂರು ಮಾಡಿತ್ತು.

ಒಮರ್ ಅಬ್ದುಲ್ಲಾ ಮತ್ತು ಪಾಯಲ್ ಅವರು 1994ರಲ್ಲಿ ದೆಹಲಿಯ ಒಬೆರಾಯ್ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪರಸ್ಪರ ಪರಿಚಯವಾಗಿ ವಿವಾಹವಾಗಿದ್ದರು. ಈ ದಂಪತಿಗೆ ಜಾಹಿರ್ ಮತ್ತು ಜಮೀರ್ ಎಂಬ ಇಬ್ಬರು ಪುತ್ರರಿದ್ದಾರೆ. ಆದರೆ, ವೈಮನಸ್ಸಿನಿಂದಾಗಿ 2009 ರಿಂದಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದ ಇವರು, 2011 ರಲ್ಲಿ ತಾವು ಬೇರೆಯಾಗುತ್ತಿರುವ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದರು.