ನವದೆಹಲಿ: ಆರ್ಎಸ್ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಈ ನಡುವೆ ದೇಶಾದ್ಯಂತ ಆರ್ಎಸ್ಎಸ್ ಅನ್ನು ನಿಷೇಧಿಸಬೇಕೆಂದು ಕಾಂಗ್ರೆಸ್ ಹಾಗೂ ಆರ್ಜೆಡಿ ಒತ್ತಾಯಿಸುತ್ತಲೇ ಇದೆ. ತಮ್ಮ ಈ ಹಿಂದಿನ ಮನವಿಯನ್ನು ಪುನರುಚ್ಛರಿಸಿರುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳನ್ನು ತಂದೊಡ್ಡುತ್ತಿರುವ ಆರ್ಎಸ್ಎಸ್ ಸಂಘಟನೆಯನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಭಾರತದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಚೌಕಟ್ಟನ್ನು ರಕ್ಷಿಸಲು ಒಮ್ಮೆ ಸರ್ದಾರ್ ವಲ್ಲಭಭಾಯಿ ಪಟೇಲ್ ಇದೇ ರೀತಿಯ ನಿರ್ಬಂಧಗಳನ್ನು ವಿಧಿಸಿದ್ದರು ಎಂದು ನೆನಪಿಸಿಕೊಂಡ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲೆ ನಿಷೇಧ ಹೇರಬೇಕೆಂದು ಒತ್ತಾಯಿಸಿದ್ದಾರೆ.
“ಆರ್ಎಸ್ಎಸ್ ಅನ್ನು ನಿಷೇಧಿಸಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸರ್ಕಾರಿ ಸೇವೆಯಲ್ಲಿರುವಾಗ ಆರ್ಎಸ್ಎಸ್ಗಾಗಿ ಕೆಲಸ ಮಾಡಬಾರದು ಎಂದು ಸರ್ದಾರ್ ಪಟೇಲ್ ಕೂಡ ಹೇಳಿದ್ದರು. ಆಗ ಹೇರಿದ್ದ ನಿಷೇಧವನ್ನು ಮೋದಿ ಸರ್ಕಾರ 2024ರಲ್ಲಿ ತೆಗೆದುಹಾಕಿತ್ತು. ಜಮಾತ್-ಇ-ಇಸ್ಲಾಮಿ ಮತ್ತು ಆರ್ಎಸ್ಎಸ್ ರೀತಿಯ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದನ್ನು ಸರ್ದಾರ್ ಪಟೇಲ್ ಅವರು ನಿಷೇಧಿಸಿದ್ದರು. ಈ ನಿಷೇಧವನ್ನು ಪುನಃಸ್ಥಾಪಿಸಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಖರ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯಂದು ಅವರನ್ನು ಸ್ಮರಿಸಿದ ಮಲ್ಲಿಕಾರ್ಜುನ ಖರ್ಗೆ, “ಸರ್ದಾರ್ ಪಟೇಲ್ ಅವರು ದೇಶವನ್ನು ಒಗ್ಗೂಡಿಸಿದರು. ದೇಶಕ್ಕೆ ಸರ್ದಾರ್ ಪಟೇಲ್ ಅವರ ಕೊಡುಗೆ ಅಪಾರ ಎಂದು ಜವಾಹರಲಾಲ್ ನೆಹರು ನಂಬಿದ್ದರು. ಫೆಬ್ರವರಿ 4, 1948ರಂದು, ಸರ್ದಾರ್ ಪಟೇಲ್ ಆರ್ಎಸ್ಎಸ್ ಬಗ್ಗೆ ಪತ್ರ ಬರೆದಿದ್ದರು. ಆರ್ಎಸ್ಎಸ್ ಗಾಂಧೀಜಿಯವರ ಮರಣವನ್ನು ಆಚರಿಸಿತು ಮತ್ತು ಸಿಹಿತಿಂಡಿಗಳನ್ನು ವಿತರಿಸಿತು” ಎಂದು ಕಾಂಗ್ರೆಸ್ ಮುಖ್ಯಸ್ಥ ಖರ್ಗೆ ಹೇಳಿದ್ದಾರೆ.
ಈ ವೇಳೆ ಸರ್ದಾರ್ ಪಟೇಲ್ ಅವರು ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ಬರೆದ ಪತ್ರವನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಉಲ್ಲೇಖಿಸಿದ್ದಾರೆ. ಅದರಲ್ಲಿ ಆಗಿನ ಗೃಹ ಸಚಿವ ಸರ್ದಾರ್ ಪಟೇಲ್ “ಆರ್ಎಸ್ಎಸ್ ಮಹಾತ್ಮ ಗಾಂಧಿಯವರ ಹತ್ಯೆಯ ದುರಂತಕ್ಕೆ ಕಾರಣವಾದ ವಾತಾವರಣವನ್ನು ಸೃಷ್ಟಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಆರ್ಎಸ್ಎಸ್ ಅನ್ನು ನಿಷೇಧಿಸದ ಬೇರೆ ದಾರಿಯಿಲ್ಲ” ಎಂದು ಹೇಳಿದ್ದರು ಎಂದಿದ್ದಾರೆ.



