ಮಂಗಳೂರು, ಮಾರ್ಚ್, 27: ಮಂಗಳೂರಿನಿಂದ-ಗಲ್ಫ್ ದೇಶಗಳ ನಡುವೆ ಹಾರಾಟ ನಡೆಸುವ ವಿಮಾನ ಟಿಕೆಟ್ ದರಗಳು ದಿಢೀರ್ ಏರಿಕೆಯಾಗಿದೆ. ಹಾಗಾದರೆ ಎಷ್ಟು ಏರಿಕೆಯಾಗಿದೆ ಹಾಗೂ ಇದರಿಂದ ಯಾರೆಲ್ಲ ಆರ್ಥಿಕ ಹೊಡೆತಕ್ಕೆ ಒಳಗಾಗುತ್ತಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಶಿಕ್ಷಣ ಸಂಸ್ಥೆಗಳ ವಾರ್ಷಿಕ ಬೇಸಿಗೆ ರಜೆ, ಈಸ್ಟರ್, ರಮ್ಜಾನ್ ಸೇರಿದಂತೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಇರುವವರು ತಮ್ಮ ತಮ್ಮ ತಾಯ್ನಾಡಿಗೆ ಹಿಂದಿರುಗುತ್ತಾರೆ. ಇದೇ ವೇಳೆ ವಿಮಾನ ಟಿಕೆಟ್ ದರವನ್ನು ಕೂಡ ಹೆಚ್ಚಳ ಮಾಡಿದ್ದು, ಇದರಿಂದ ಹೆಚ್ಚಾಗಿ ಕರಾವಳಿ ಭಾಗದ ಪ್ರಯಾಣಿಕರಿಗೆ ತೀವ್ರ ಆರ್ಥಿಕ ಹೊಡೆತ ಬಿದ್ದಂತಾಗಿದೆ.
ಕೊಲ್ಲಿ ರಾಷ್ಟ್ರಗಳಿಗೆ ಸಾಮಾನ್ಯವಾಗಿ ಟಿಕೆಟ್ ದರ 17,000-20,000 ಸಾವಿರ ರೂಪಾಯಿ ಇರುತ್ತದೆ. ಆದರೆ ಇತ್ತೀಚೆಗೆ ಈ ದರ ಮೂರು ಪಟ್ಟು ಜಾಸ್ತಿಯಾಗಿದೆ. ದಮಾಮ್, ದುಬಾೖ, ಅಬುಧಾಬಿ, ದೋಹಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವವರು ಟೆಕೆಟ್ಗಾಗಿ ಬರೋಬ್ಬರಿ 50 ಸಾವಿರ ರೂಪಾಯಿ ಪಾವತಿ ಮಾಡಬೇಕಾಗಿದೆ. ರಜಾ ದಿನಗಳ ಸಮಯದಲ್ಲಿ ಟಿಕೆಟ್ ದರ ಏರಿಕೆ ಹಿನ್ಬೆಲೆ ಗಲ್ಫ್ ರಾಷ್ಟ್ರಗಳಲ್ಲಿ ಸಣ್ಣ ಆದಾಯದ ಉದ್ಯೋಗದಲ್ಲಿ ತೊಡಗಿಕೊಂಡಿರುವ ಜನರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಆರ್ಥಿಕ ಹೊಡೆತ ತಟ್ಟಿದಂತಾಗುದೆ. ಅಲ್ಲದೆ ಇದರಿಂದ ಹೆಚ್ಚು ಕರಾವಳಿ ಮೂಲದ ಬಹುತೇಕ ಜನರು ಆರ್ಥಿಕ ನಷ್ಟದ ತೊಂದರೆಗೀಡಾಗಿದ್ದಾರೆ ಎನ್ನುವ ದೂರುಗಳು ಕೇಳಿಬರುತ್ತಿವೆ. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ವಿಮಾನಯಾನ ಸಂಸ್ಥೆಗಳು ಟಿಕೆಟ್ ದರ ತಗ್ಗಿಸಬೇಕಾಗಿದೆ ಎನ್ನುವುದು ಕರಾವಳಿಗರ ಒತ್ತಾಯವಾಗಿದೆ.



