ಹಾಸನ: ಶಬರಿಮಲೆಗೆ ಹೋಗಿ ಬಂದ ದಿನವೇ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
4 ವರ್ಷಗಳಿಂದ ಗಂಡನಿಂದ ದೂರವಿದ್ದ ಪತ್ನಿ, ಇದ್ದಕ್ಕಿದ್ದಂತೆ ಗಂಡನ ಬಳಿ ಬಂದು ಎರಡನೇ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಗಂಡನ ಕೋಪ ನೆತ್ತಿಗೇರಿದ್ದು, ಜಗಳ ತಾರಕಕ್ಕೇರಿ ಪತ್ನಿಯನ್ನ ಕೊಲೆಗೈದಿದ್ದಾನೆ ಎನ್ನಲಾಗ್ತಿದೆ.
ಎರಡನೇ ಮದುವೆಯಾಗಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಮೊದಲ ಪತ್ನಿಯನ್ನೇ ಗಂಡ ಬರ್ಬರವಾಗಿ ಹತ್ಯೆಗೈದಿದ್ದಾನೆ ಎಂದು ತಿಳಿದು ಬಂದಿದೆ. ಕುಮಾರ್ ಎಂಬಾತ ಶಬರಿಮಲೆಗೆ ಹೋಗಿ ಬಂದ ದಿನವೇ ಈ ಕೃತ್ಯ ವೆಸಗಿದ್ದಾನೆ ಎನ್ನಲಾಗ್ತಿದೆ. ರಾಧ (40) ಎಂಬಾಕೆಯೇ ಕೊಲೆಯಾದ ದುರ್ದೈವಿ ಆಗಿದ್ದಾರೆ
ಜನವರಿ 10ರ ರಾತ್ರಿ ಮನೆಯಲ್ಲೇ ರಾಧಾ ಹತ್ಯೆ ನಡೆದಿದೆ ಎನ್ನಲಾಗ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಪತಿಯಿಂದ ರಾಧಾ ಬೇರೆಯಾಗಿ ವಾಸವಾಗಿದ್ದರಂತೆ. ಇದೇ ವೇಳೆ ಜನವರಿ ಮೊದಲ ವಾರ ಕುಮಾರ್ ಶಬರಿಮಲೆಗೆ ತೆರಳಿದ್ರು. ಇರುಮುಡಿ ಕಟ್ಟೋ ವೇಳೆ ಪತ್ನಿ ಸ್ಥಾನದಲ್ಲಿ ಬೇರೊಬ್ಬ ಮಹಿಳೆ ಪೂಜೆ ಮಾಡಿರುವ ವಿಚಾರ ರಾಧಾಗೆ ಗೊತ್ತಾಗಿದೆ. ಇದೇ ವಿಚಾರ ಪ್ರಶ್ನೆ ಮಾಡಲೆಂದು ಪತಿ ಶಬರಿಮಲೆಯಿಂದ ಬಂದ ಶನಿವಾರ ರಾತ್ರಿಯೇ ಯಡೂರಿಗೆ ರಾಧಾ ಬಂದಿದ್ದಾರೆ.
ಎರಡನೇ ಮದುವೆ ಬಗ್ಗೆ ಪ್ರಶ್ನೆ ಮಾಡಿದ ರಾಧ ಹಾಗೂ ಕುಮಾರ್ ನಡುವೆ ಮನೆಯಲ್ಲೇ ಭಾರೀ ಜಗಳ ನಡೆದಿದೆ. ಗಲಾಟೆ ತಾರಕ್ಕೇರಿದ ವೇಳೆ ಕುಮಾರ್, ರಾಧಾಳನ್ನ ಕೊಲೆಗೈದಿದ್ದಾನಂತೆ. ಬಳಿಕ ಆಕೆಯ ಮೃತ ದೇಹವನ್ನ ಯಗಚಿ ನದಿಗೆ ಎಸೆದಿದ್ದ ಎಂದು ತಿಳಿದು ಬಂದಿದೆ.
ಕೊಲೆಗೈದ ದಿನವೇ ಹಾಸನ ತಾಲೂಕಿನ ಕಂದಲಿ ಬಳಿಯ ಯಗಚಿ ನದಿಗೆ ಶವ ಬಿಸಾಡಿದ್ದ ಪತಿ ಬಳಿಕ ತಾನೇ ಹೋಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಇಂದು (ಜ.13) ಯಗಚಿ ನದಿಯಿಂದ ಮೃತದೇಹ ಹೊರ ತೆಗೆದ ಪೊಲೀಸರು, ಆರೋಪಿಯನ್ನ ಬಂಧಿಸಿದ್ದಾರೆ. ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕೊಲೆ ಕೇಸ್ ದಾಖಲಾಗಿದೆ.



