Flash News

ಪ್ರಧಾನಿ ಮೋದಿ ಹತ್ಯೆ ಯತ್ನದ ಸಂಚಿನ ಮಾಸ್ಟರ್​ ಮೈಂಡ್​​​​​, ನಕ್ಸಲ್​ ನಾಯಕ ಪ್ರಶಾಂತ್​ ಬೋಸ್​ ನಿಧನ!

ರಾಂಚಿ (ಜಾರ್ಖಂಡ್): ದೇಶದ ಅತಿದೊಡ್ಡ ನಕ್ಸಲ್​ ನಾಯಕ ಹಾಗೂ ಮಾವೋವಾದಿ ಸಂಘಟನೆಯ ಎರಡನೇ ಪ್ರಮುಖ ಕಮಾಂಡರ್​ ಆಗಿದ್ದ ಪ್ರಶಾಂತ್​ ಬೋಸ್​ ಅಲಿಯಾಸ್​ ಕಿಶನ್​ ದಾ ಇಂದು ನಿಧನರಾಗಿದ್ದಾರೆ. 80 ವರ್ಷದ ಬೋಸ್​ ಕಳೆದ 4 ವರ್ಷದಿಂದ ಜಾರ್ಖಂಡ್​ನ ಜೈಲಿನಲ್ಲಿದ್ದರು. ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ.

ಕಳೆದ ವಾರವಷ್ಟೇ ಗೃಹ ಮಂತ್ರಿ ಅಮಿತ್​ ಶಾ ಅವರು ಭಾರತ ದೇಶವನ್ನು ನಕ್ಸಲ್​ ಮುಕ್ತ ದೇಶವೆಂದು ಘೋಷಿಸಿದ್ದರು. ಇದೀಗ ಪ್ರಶಾಂತ್​ ಬೋಸ್ ಸಾವು ನಕ್ಸಲ್​ ಸಂಘಟನೆಯ ತಲೆಯೇ ಉರುಳಿದಂತಾಗಿದೆ. ಪ್ರಶಾಂತ್​ ಬೋಸ್​ರನ್ನು 2021ರಲ್ಲಿ ಜಾರ್ಖಂಡ್​ನ ಸರಾಯ್ಕೆಲಾದಲ್ಲಿ ಭದ್ರತಾ ಪಡೆಗಳು ಬಂಧಿಸಿದ್ದವು. ಆ ಬಂಧನದ ಬಳಿಕ ಪ್ರಶಾಂತ್​ ಬೋಸ್​ ರಾಂಚಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.

ಇನ್ನು ಅಂದಿನ ಡಿಜಿಪಿ ನೀರಜ್​ ಸಿನ್ಹಾ ಅವರ ಮಾಹಿತಿ ಪ್ರಕಾರ, ಪ್ರಶಾಂತ್​ ಬೊಸ್​ ಬಂಧನದ ಬಳಿಕ ನಡೆದ ತನಿಖೆಯಲ್ಲಿ ಮಾವೋವಾದಿ ಸಂಘಟನೆಯ ಬಗ್ಗೆ ಅತ್ಯಾಂತ ಆಳವಾದ ಹಾಗೂ ವಿಸ್ತಾರವಾದ ಮಾಹಿತಿಯನ್ನು ಒದಗಿಸಿದ್ದರು. ಈ ಪ್ರಶಾಂತ್​ ಬೋಸ್​ರನ್ನು ಮಾವೋವಾದಿ ಸಂಘಟನೆಯ ಜನಕ ಎಂದು ಕರೆಯಲಾಗಿತ್ತು. ಜಾರ್ಖಂಡ್​ ಸೇರಿದಂತೆ ಬಿಹಾರ, ಒಡಿಶಾ, ಮಹಾರಾಷ್ಟ್ರ​ ಮತ್ತು ಛತ್ತೀಸ್​ಗಢದಲ್ಲಿ ಪ್ರಶಾಂತ್​ ಬೋಸ್​ ಮೇಲೆ ಹಲವು ಪ್ರಕರಣಗಳಿವೆ.

 ಪುಣೆಯ ಭೀಮಾ ಕೋರೆಂಗಾವದದ ಹಿಂಸಾಚಾರದ ಪ್ರಕರಣ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಪ್ರಶಾಂತ್​ ಬೋಸ್​ ಪ್ರಮುಖ ಪಾತ್ರ ವಹಿಸಿದ್ದರು ಎಂದು ಎನ್​ಐಎ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.