ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಫ್ಲೈ ಓವರ್ ನಲ್ಲಿ ಶುಕ್ರವಾರ ಮುಂಜಾನೆ ಮೀನಿನ ವ್ಯಾಪಾರಿ, ರೌಡಿ ಶೀಟರ್ ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ (46) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಆರು ಮಂದಿ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಅಪರಾಧ ಪತ್ತೆ ದಳದ ಎಸಿಪಿಯವರಿಗೆ ವರ್ಗಾಯಿಸಲಾಗಿದ್ದು, ಆರೋಪಿಗಳು ಪದೇ ಪದೇ ಜಾಗ ಬದಲಾಯಿಸುತ್ತಿರುವುದೇ ಬಂಧನ ವಿಳಂಬಕ್ಕೆ ಕಾರಣವಾಗಿದೆ. ಪ್ರಕರಣದಲ್ಲಿ ಪರೋಕ್ಷವಾಗಿ ಮತ್ತಷ್ಟುಆರೋಪಿಗಳು ಶಾಮೀಲಾಗಿರುವ ಸುಳಿವು ಸಿಕ್ಕಿದ್ದು ಅವರಿಗೂ ಶೋಧ ನಡೆಯುತ್ತಿದೆ.
ಆರೋಪಿಗಳಿಗೆ ಕೃತ್ಯ ನಡೆಸಲು ಹಾಗೂ ಸ್ಥಳದಿಂದ ಪರಾರಿಯಾಗಲು ಹಲವು ಮಂದಿ ಸಹಕರಿಸಿದ್ದಾರೆ. ಈಗಾಗಲೇ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಒಂದು ವೇಳೆ ಸಹಕರಿಸಿದ್ದಾರೆ ಎಂದಾದರೆ ಅವರನ್ನು ಬಂಧಿಸಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.



