ಧಾರವಾಡ: ಅವಳಿ ನಗರದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದುದ್ದು, ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಫೈರೋಜ್ ಪಠಾಣ್ನನ್ನು ಧಾರವಾಡ ನಗರದ ಹಾಶ್ಮಿ ನಗರದಲ್ಲಿರುವ ಅವರ ಮನೆಯಲ್ಲಿ ಬರ್ಬರವಾಗಿ ಹತ್ಯೆಗೈಯಲಾಗಿದೆ. ಶುಕ್ರವಾರ ರಾತ್ರಿ ಆತನ ಮನೆಗೆ ನುಗ್ಗಿದ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರು ಮಂದಿ ಸೇರಿ ಈ ಕೃತ್ಯವನ್ನೆಸಗಿದ್ದಾರೆ ಎನ್ನಲಾಗಿದೆ.
ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ!
ಮೊಹಮ್ಮದ್ ಶಾ ಸೇರಿದಂತೆ ಸದ್ದಾಂ, ಗೌಸ್, ಪರ್ವೇಜ್ ಹತ್ಯೆಗೈದ ಆರೋಪಿಗಳು ಎಂದು ತಿಳಿದುಬಂದಿದೆ. ಕೊಲೆ ಸಂಚು ರೂಪಿಸಿದ್ದ ಅರ್ಬಾಜ್ ಪಠಾಣ್ ಮತ್ತು ಗುಲಾಬ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹತ್ಯೆಗೈದ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ವೈಯಕ್ತಿಕ ಹಾಗೂ ರಾಜಕೀಯ ವೈಷಮ್ಯವೇ ಹತ್ಯೆಗೆ ಕಾರಣವಾಗಿರಬಹುದೆಂದು ಶಂಕಿಸಲಾಗಿದ್ದು, ಉಪನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸಂಭ್ರಮದಲ್ಲಿದ್ದ ಮನೆಗೆ ಸೂತಕ
ಸಿಸಿಟಿವಿ ಕ್ಯಾಮರಾದಲ್ಲಿ ಮೊಹಮ್ಮದ್ ಶಾ ಎಂಬಾತ ಕಾಣಿಸಿಕೊಂಡಿದ್ದು, ಆತನೊಂದಿಗೆ ಇನ್ನೂ ನಾಲ್ವರು ಇದ್ದರು ಎಂದು ಫೈರೋಜ್ನ ಆಪ್ತರು ತಿಳಿಸಿದ್ದಾರೆ. ಫೈರೋಜ್ ಮತ್ತು ಮೊಹಮ್ಮದ್ ಶಾ ನಡುವೆ ಮೊದಲಿನಿಂದಲೂ ಜಗಳವಿತ್ತು. ಅಲ್ಲದೆ, ಹೊಲದ ಸಂಬಂಧದ ವೈಷಮ್ಯದಿಂದಲೂ ಈ ಘಟನೆ ನಡೆದಿದೆ. ರಾತ್ರಿ ಮನೆಗೆ ಬಂದಿದ್ದ ಆರೋಪಿಗಳು, ಫೈರೋಜ್ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಕುಟುಂಬದ ಸದಸ್ಯರಾದ ತಂಗಿ ಮತ್ತು ತಾಯಿಗೂ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಅಷ್ಟೇ ಅಲ್ಲದೆ ಇನ್ನು 15 ದಿನಗಳಲ್ಲಿ ವಿವಾಹ ನಡೆಯಬೇಕಿತ್ತು. ಇದರ ಹಿನ್ನೆಲೆಯಲ್ಲಿ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಹಂಚುವ ಕಾರ್ಯದಲ್ಲಿ ಕುಟುಂಬಸ್ಥರು ತೊಡಗಿದ್ದರು. ಮದುವೆಯಾಗಿ ಹೊಸ ಜೀವನ ನಡೆಸಬೇಕಿದ್ದ ಜೀವ ದುರಂತ ಅಂತ್ಯ ಕಂಡಿದೆ.



